ಜಿಎಸ್‍ಟಿ ದರ ಕಡಿತದ ಬೊಮ್ಮಾಯಿ ಮನವಿಗೆ ನಿರ್ಮಲಾ ಸೀತಾರಾಮನ್ ಸಮ್ಮತಿ

Public TV
2 Min Read

– ಕೊರೊನಾ ಟೆಸ್ಟಿಂಗ್ ಕಿಟ್, ರೆಮ್‍ಡಿಸಿವಿರ್, ಆಮ್ಲಜನಕ ಉತ್ಪಾದನಾ ಉಪಕರಣಗಳ ಮೇಲಿನ ಜಿಎಸ್‍ಟಿ ಕಡಿತ

– 44ನೇ ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಶಿಫಾರಸು

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ 44ನೇ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಪರಿಷತ್ತಿನ ಮಹತ್ವದ ಸಭೆ ಶನಿವಾರ ನಡೆಯಿತು. ಸಭೆಯಲ್ಲಿ ಗ್ರೂಪ್ ಆಫ್ ಮಿನಿಸ್ಟರ್ಸ್ ಸಲ್ಲಿಸಿದ ಕೋವಿಡ್ ಪರಿಹಾರ ಸಾಮಗ್ರಿಗಳ ಮೇಲಿನ ಜಿಎಸ್‍ಟಿ ದರಗಳಲ್ಲಿ ರಿಯಾಯಿತಿ, ವಿನಾಯಿತಿಗೆ ಸಂಬಂಧಿಸಿದ ವರದಿಯ ಕುರಿತು ಚರ್ಚೆ ನಡೆಯಿತು. ಈ ವೇಳೆ ರಾಜ್ಯದ ಜಿಎಸ್‍ಟಿ ಪ್ರತಿನಿಧಿ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜಿಎಸ್‍ಟಿ ದರ ಕಡಿತಕ್ಕೆ ಮನವಿ ಮಾಡಿದ್ದು, ಇದಕ್ಕೆ ನಿರ್ಮಲಾ ಸೀತಾರಾಮನ್ ಅವರು ಸಭೆಯಲ್ಲಿಯೇ ಅನುಮೋದನೆ ನೀಡಿದರು.

ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದ ರಾಜ್ಯದ ಜಿಎಸ್‍ಟಿ ಪ್ರತಿನಿಧಿ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಗ್ರೂಪ್ ಆಫ್ ಮಿನಿಸ್ಟರ್ಸ್ ಶಿಫಾರಸುಗಳನ್ನು ಸ್ವಾಗತಿಸಿದರು. ಅದರ ಜೊತೆಗೆ ಇನ್ನಷ್ಟು ತೆರಿಗೆ ಕಡಿತಕ್ಕಾಗಿ ಕೇಂದ್ರ ಹಣಕಾಸು ಸಚಿವರನ್ನು ಕೋರಿದರು.

ತಾಪಮಾನ ಪರೀಕ್ಷಾ ಉಪಕರಣ, ಶವಾಗಾರಗಳಿಗಾಗಿ ಬಳಕೆಯಾಗುವ ಗ್ಯಾಸ್, ಎಲೆಕ್ಟ್ರಿಕ್ ಫರ್ನೆಸ್ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.18 ರಿಂದ 5ಕ್ಕೆ ಮತ್ತು ಅಂಬುಲೆನ್ಸ್ ವಾಹನಗಳ ಮೇಲಿನ ತೆರಿಗೆಯನ್ನು ಶೇ.28ರಿಂದ ಶೇ.12ಕ್ಕೆ ಇಳಿಸುವಂತೆ ಮನವಿ ಮಾಡಿದರು. ಬಸವರಾಜ್ ಬೊಮ್ಮಾಯಿ ಅವರ ಈ ಮನವಿಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆಯಲ್ಲಿಯೇ ಅನುಮೋದನೆ ನೀಡಿದರು.

ಈ ರಿಯಾಯಿತಿಗಳನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲು ಅವರು ಮಾಡಿಕೊಂಡ ಮನವಿಗೂ ಜಿಎಸ್‍ಟಿ ಮಂಡಳಿ ಒಪ್ಪಿಗೆ ನೀಡಿತು. ಇದಕ್ಕಾಗಿ ಸಚಿವ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಿಗೆ ಧನ್ಯವಾದ ಅರ್ಪಿಸಿದರು.

2022ರ ನಂತರದ ಜಿಎಸ್‍ಟಿ ಪರಿಹಾರಕ್ಕೆ ಸಂಬಂಧಿಸಿದ ವಿಷಯದ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಬೊಮ್ಮಾಯಿ ಅವರು ಕೋರಿದರು. ಇದಕ್ಕೆ ಸ್ಪಂದಿಸಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಶೀಘ್ರದಲ್ಲಿಯೇ ಸಭೆ ಕರೆಯಲು ಒಪ್ಪಿಕೊಂಡರು. ಅದರಂತೆ ಇಂದು ಸಭೆ ಕರೆದು ಚರ್ಚೆ ನಡೆಸಿದ್ದಾರೆ.

ಅಲ್ಲದೆ 2021- 22ನೇ ಸಾಲಿಗೆ 18,109 ಕೋಟಿ ರೂಪಾಯಿಗಳ ಜಿಎಸ್‍ಟಿ ಪರಿಹಾರ ಸಾಲಕ್ಕೆ ಅನುಮೋದನೆ ನೀಡಿದ್ದಕ್ಕೆ ಬೊಮ್ಮಾಯಿ ಅವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು. ಇದು ಕೋವಿಡ್ ವಿರುದ್ಧದ ಸಮರದಲ್ಲಿ ಸಹಕಾರಿಯಾಗುತ್ತದೆ ಎಂದರು.

ಇದೇ ವೇಳೆ ಹಲವು ಔಷಧ ಸೇರಿದಂತೆ ವೈದ್ಯಕೀಯ ಪರಿಕರಗಳ ಮೇಲಿನ ಜಿಎಸ್‍ಟಿ ದರವನ್ನು ಕಡಿತಗೊಳಿಸಲು ನಿರ್ಧರಿಸಲಾಯಿತು. ಗ್ರೂಪ್ ಆಫ್ ಮಿನಿಸ್ಟರ್ಸ್ ಕೆಲವು ಔಷಧಗಳ ಮೇಲಿನ ಜಿಎಸ್ ಟಿಯನ್ನು ಶೇ.5ರಿಂದ ಶೂನ್ಯಕ್ಕೆ, ರೆಮ್‍ಡಿಸಿವಿರ್ ಮೇಲಿನ ಜಿಎಸ್‍ಟಿಯನ್ನು ಶೇ.12ರಿಂದ ಶೇ.5ಕ್ಕೆ, ಆಮ್ಲಜನಕ ಉತ್ಪಾದನಾ ಉಪಕರಣ ಹಾಗೂ ಕೋವಿಡ್ ಪರೀಕ್ಷಾ ಕೀಟ್‍ಗಳ ಮೇಲಿನ ಶೇ.12ರ ಜಿಎಸ್‍ಟಿ ದರವನ್ನು ಶೇ.5ಕ್ಕೆ ಕಡಿಮೆ ಮಾಡುವುದಕ್ಕೆ ಶಿಫಾರಸ್ಸು ಮಾಡಿದೆ. ತಾಪಮಾನ ಪರೀಕ್ಷಾ ಉಪಕರಣ ಹಾಗೂ ಶವಾಗಾರ ಗಳಿಗಾಗಿ ಬಳಕೆ ಆಗುವ ಗ್ಯಾಸ್, ಎಲೆಕ್ಟ್ರಿಕ್ ಫರ್ನೇಸ್ ಗಳಿಗೆ ಸಂಬಂಧಿಸಿದಂತೆ ಜಿಎಸ್‍ಟಿ ಯನ್ನು ಶೇ.18 ರಿಂದ 12ಕ್ಕೆ ಕಡಿತಗೊಳಿಸಲು ಶಿಫಾರಸು ಮಾಡಿದೆ. ಅಂಬುಲೆನ್ಸ್ ಮೇಲೆ ಯಾವುದೇ ಕಡಿತವನ್ನು ಶಿಫಾರಸು ಮಾಡಿಲ್ಲ. ಸಭೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್.ಶ್ರೀಕರ್ ಸಭೆಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *