ಜಿಂದಾಲ್ ಕಾರ್ಖಾನೆಯನ್ನ ಲಾಕ್ ಮಾಡದಿದ್ರೆ ದಂಗೆ- ಸರ್ಕಾರಕ್ಕೆ ಬಳ್ಳಾರಿ ಜನರ ವಾರ್ನಿಂಗ್

Public TV
2 Min Read

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಸದ್ಯ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 610 ತಲುಪಿದೆ. ಇದರಲ್ಲಿ ಮುಕ್ಕಾಲು ಭಾಗ ಜಿಂದಾಲ್ ಕಾರ್ಖಾನೆಯದ್ದೆ. ಹೀಗಾಗಿ ಜಿಂದಾಲ್ ಕಾರ್ಖಾನೆಯನ್ನು ಲಾಕ್‍ಡೌನ್ ಮಾಡಲು ಒತ್ತಾಯ ಹೆಚ್ಚಾಗಿ ಕೇಳಿ ಬರುತ್ತಿದೆ.

ಕಳೆದ ಮೈತ್ರಿ ಸರ್ಕಾರದಲ್ಲಿ ಜಿಂದಾಲ್‍ಗೆ 3,600 ಎಕರೆ ಜಮೀನು ಪರಭಾರೆ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದೇ ವಿಚಾರಕ್ಕೆ ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ರಾಜೀನಾಮೆ ಸಹ ನೀಡಿದ್ದರು. ಆದರೆ ಈ ವರ್ಷ ಜಿಂದಾಲ್‍ನಲ್ಲಿ ಕೊರೊನಾ ಹೆಚ್ಚಾಗುತ್ತಿದ್ದರೂ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಕೊರೊನಾ ತಡೆ ನಿಯಮಗಳನ್ನ ಗಾಳಿಗೆ ತೂರಿರುವ ಜಿಂದಾಲ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಂದಾಲ್ ಮುಂದೆ ಧರಣಿ ಕೂರುವುದಾಗಿ ಹೋರಾಟಗಾರರು ಎಚ್ಚರಿಸಿದ್ದಾರೆ.

ಬಳ್ಳಾರಿ ಕೂಡ ಬಹುದೊಡ್ಡ ಕೊರೊನಾ ಹಾಟ್‍ಸ್ಪಾಟ್ ಆಗುತ್ತಿದೆ. ಯಾಕಂದರೆ ಬಳ್ಳಾರಿ ಜಿಲ್ಲೆಯಲ್ಲಿ 610ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. ಅದರಲ್ಲಿ ಜಿಂದಾಲ್‍ನಲ್ಲಿಯೇ 350ಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಜಿಂದಾಲ್‍ನಲ್ಲಿ ಕೇವಲ 21 ದಿನಗಳಲ್ಲೇ 356ಕ್ಕೂ ಹೆಚ್ಚು ಪ್ರಕರಣ ಬಂದಿವೆ. ಅಷ್ಟೇ ಅಲ್ಲದೇ ಜಿಂದಾಲ್‍ನಲ್ಲಿ ಸೋಂಕು ಹರಡುವ ಪ್ರಮಾಣ ಶೇ. 15.70 ರಷ್ಟಿದೆ. ಹೀಗಿದ್ದರೂ ಸರ್ಕಾರ ನೀಡಿದ ಮಾರ್ಗಸೂಚಿಗಳನ್ನ ಜಿಂದಾಲ್ ಪಾಲಿಸುತ್ತಿಲ್ಲ ಎಂದು ಸ್ಥಳೀಯ ಹೋರಾಟಗಾರ ಹೇಳಿದರು.

ಜೊತೆಗೆ ಜಿಂದಾಲ್ ಬಗ್ಗೆ ಮೃದು ಧೋರಣೆ ತಾಳಿರುವ ಉಸ್ತುವಾರಿ ಸಚಿವ ಅನಂದ್ ಸಿಂಗ್ ರಾಜಿನಾಮೆಗೆ ಸಹ ಒತ್ತಾಯಿಸಿದ್ದರು. ಅಲ್ಲದೇ ಕ್ಷಣಕ್ಷಣಕ್ಕೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಜಿಂದಾಲ್ ಕಾರ್ಖಾನೆಯಿಂದಾಗಿ ಇಡೀ ಬಳ್ಳಾರಿ ಜನ ಆತಂಕಗೊಂಡಿದ್ದಾರೆ. ಜಿಂದಾಲ್‍ಗೆ ಲಾಕ್‍ಡೌನ್ ಮಾದರಿಯ ನಿಯಮ ಹೇರಿ ಕಾರ್ಖಾನೆ ಒಳಗಿನಿಂದ ಯಾರು ಬರದಂತೆ ನೋಡಿಕೊಳ್ಳಲಾಗುವುದು ಅಂತ ಜಿಲ್ಲಾಡಳಿತ ಹೇಳಿತ್ತು. ಆದರೆ ಅದಕ್ಕೂ ಕ್ಯಾರೇ ಎನ್ನದ ಜಿಂದಾಲ್, ಒಳ, ಹೊರ ಹೋಗುವ ಪ್ರಕ್ರಿಯೆ ರಾಜಾರೋಶವಾಗಿಯೇ ನಡೆಯುತ್ತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು ಕ್ರಮ ಕೈಗೊಳ್ಳದಿದ್ದರೇ ನಾವೇ ಜಿಂದಾಲ್ ಮುಂದೇ ಧರಣಿ ನಡೆಸೋದಾಗಿ ಸ್ಥಳೀಯ ಹೋರಾಟಗಾರರು ಎಚ್ಚರಿಸಿದ್ದಾರೆ.

ಜಿಂದಾಲ್ ಕಾರ್ಖಾನೆಯಲ್ಲಿ ಕೇವಲ 21 ದಿನಗಳಲ್ಲಿ 356ಕ್ಕೂ ಹೆಚ್ಚು ಕೊರೊನಾ ಪ್ರಕರಣ ಬಂದಿದ್ದರೂ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಸ್ಥಳೀಯ ಹೋರಾಟಗಾರು ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *