ಜಾಸ್ತಿ ಕೆಲಸ ಮಾಡುವ ನಿಮ್ಮ ಮೇಲೆ ಜನ ಪ್ರೀತಿ ಇಟ್ಟಿದ್ದಾರೆ ಅದನ್ನು ಕಳೆದುಕೊಳ್ಳಬೇಡಿ: ಪ್ರತಾಪ್ ಸಿಂಹ

Public TV
1 Min Read

ಮೈಸೂರು: ಜಾಸ್ತಿ ಕೆಲಸ ಮಾಡುವ ನಿಮ್ಮ ಮೇಲೆ ಜನ ಪ್ರೀತಿ ಇಟ್ಟಿದ್ದಾರೆ. ಆ ಪ್ರೀತಿಯನ್ನು ನೀವು ಕಳೆದುಕೊಳ್ಳಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಮೈಸೂರು ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರನ್ನು ದಾರಿ ತಪ್ಪಿಸಿದ ರೈತ ಮುಖಂಡರೊಬ್ಬರು ಈಗ ಕೆಎಸ್‌ಆರ್‌ಟಿಸಿ ನೌಕರರ ದಾರಿ ತಪ್ಪಿಸುತ್ತಿದ್ದಾರೆ. ಆ ಮುಖಂಡನನ್ನು ಕೆಎಸ್‌ಆರ್‌ಟಿಸಿ ನೌಕರರು ತಮ್ಮ ನಾಯಕ ಎಂದು ಮಾಡಿಕೊಡಿದ್ದೆ ತಪ್ಪು. ರೈತರನ್ನೇ ದಾರಿ ತಪ್ಪಿಸಿದವರನ್ನು ಕೆಎಸ್‌ಆರ್‌ಟಿಸಿ ನೌಕರರು ತಮ್ಮ ನಾಯಕನಾಗಿ ಮಾಡಿಕೊಂಡಾಗ ಇವರು ದಾರಿ ತಪ್ಪದೆ ಇರುತ್ತಾರಾ ಎಂದು ಪ್ರಶ್ನಿಸಿದರು.

ಪ್ರೊ. ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ ಅವರು ಇದ್ದಾಗ ರೈತ ಮುಂಡರು, ಹೋರಾಟದ ಬಗ್ಗೆ ಗೌರವವಿತ್ತು. ಅವರಿಬ್ಬರು ಅಸ್ತಂಗತ ಆದ ನಂತರ ಈಗ ಅಂತಹ ಮುಖ ಆ ಹೋರಾಟದಲ್ಲಿ ಇಲ್ಲ. ನಾವು ಎಲ್ಲಾ ವಿಭಾಗಗಳಲ್ಲಿ ಖಾಸಗೀಕರಣದ ಬಗ್ಗೆ ಚರ್ಚೆ ಆಗುತ್ತಿದೆ. ಕೆಎಸ್‍ಆರ್‍ಟಿಸಿ ನೌಕರರು ರಾಜ್ಯ ಸರ್ಕಾರ ಸಂಕಷ್ಟದಲ್ಲಿ ಇರುವಾಗ ಈ ರೀತಿ ಹೋರಾಟಕ್ಕೆ ಇಳಿಯುವುದು ತಪ್ಪು ಎಂದರು.

ಇದು ಮುಂದುವರಿದರೆ ಜನರೇ ಈ ವಿಭಾಗದಲ್ಲೂ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ. ಜನ ಈ ರೀತಿ ಧ್ವನಿ ಎತ್ತುವಂತೆ ಮಾಡಬೇಡಿ. ಜಾಸ್ತಿ ಕೆಲಸ ಮಾಡುವ ನಿಮ್ಮ ಮೇಲೆ ಜನ ಪ್ರೀತಿ ಇಟ್ಟಿದ್ದಾರೆ. ಆ ಪ್ರೀತಿ ಕಳೆದು ಕೊಳ್ಳಬೇಡಿ. ಎಸ್ಮಾ ಜಾರಿ ಮಾಡಿ ಬಲವಂತವಾಗಿ ಕೆಲಸಕ್ಕೆ ಹಾಜರಾಗುವಂತಹ ಪರಿಸ್ಥಿತಿ ತಂದು ಕೊಳ್ಳಬೇಡಿ. ಎಸ್ಮಾ ಜಾರಿಯ ಅನಿರ್ವಾಯತೆಯನ್ನು ಸರ್ಕಾರಕ್ಕೆ ತಂದಿಡಬೇಡಿ ಎಂದು ಮನವಿ ಮಾಡಿಕೊಂಡರು.

ಸಿದ್ದರಾಮಯ್ಯ ಅವರು ಈಗ ಬೇಡಿಕೆ ಈಡೇರಿಸಿ ಎನ್ನುತ್ತಿದ್ದಾರೆ. ಅವರ ಅಧಿಕಾರವಧಿಯಲ್ಲೇ ಅವರು ಈ ಕೆಲಸ ಮಾಡಬಹುದಿತಲ್ವಾ?. ಸಿದ್ದರಾಮಯ್ಯ ಅವರ ಇವತ್ತಿನ ಮಾತನ್ನು ಜನರು ಮೆಚ್ಚಲ್ಲ ಅವರ ಆತ್ಮಸಾಕ್ಷಿಯೂ ಮೆಚ್ಚಲ್ಲ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *