ಜಾರಕಿಹೊಳಿ ಮನೆಯಲ್ಲಿ ಸಚಿವಾಕಾಂಕ್ಷಿಗಳ ರಹಸ್ಯ ಸಭೆ- ಇಲ್ಲಿದೆ ಇನ್‍ಸೈಡ್ ಮಾಹಿತಿ

Public TV
2 Min Read

– ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನೀಡಬಾರದು
– ಮೂಲ ಬಿಜೆಪಿ ನಾಯಕರಿಗೂ ಜಾರಕಿಹೊಳಿ ನಾಯಕ?

ಬೆಂಗಳೂರು: ಉಪಚುನಾವಣೆ ಫಲಿತಾಂಶ ಬೆನ್ನಲ್ಲೇ ಬಿಜೆಪಿಯಲ್ಲಿ ರಹಸ್ಯ ಸಭೆ ನಡೆಸಲಾಗಿದ್ದು, ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ಸೇರಿದ ಸಚಿವಾಕಾಂಕ್ಷಿಗಳು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.

ಸಚಿವಾಕಾಂಕ್ಷಿಗಳಾದ ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ರಾಜುಗೌಡ, ರೇಣುಕಾಚಾರ್ಯ, ಶಾಸಕ ಬೆಳ್ಳಿ ಪ್ರಕಾಶ್ ಸೇರಿದಂತೆ ಹಲವು ಸಚಿವಾಕಾಂಕ್ಷಿಗಳು ಸಭೆ ನಡೆಸಿದ್ದಾರೆ. ಸಚಿವ ಸಂಪುಟ ಪುನಾರಚನೆ ವಿಚಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಸಿಎಂಗೆ ಸಚಿವ ಸ್ಥಾನದ ಬೇಡಿಕೆ ಸಲ್ಲಿಸುವುದು, ಹಾಲಿ ಸಚಿವರನ್ನು ಕೈ ಬಿಟ್ಟರೆ ಮತ್ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬೆಲ್ಲ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಸಚಿವಾಕಾಂಕ್ಷಿಗಳ ಪರ ಹೈಕಮಾಂಡ್ ಮುಂದೆ ರಮೇಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಲಿದ್ದಾರೆ. ಸದ್ಯದಲ್ಲೇ ದೆಹಲಿಗೆ ತೆರಳಲು ಸಚಿವ ರಮೇಶ್ ಜಾರಕಿಹೊಳಿ ನಿರ್ಧಾರಿಸಿದ್ದಾರೆ. ಸಿಎಂಗೂ ಮುನ್ನ ದೆಹಲಿಗೆ ಸಾಹುಕಾರ್ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸಭೆ ಮೂಲಕ ವಲಸಿಗರಿಗೂ ನಾಯಕರಾಗಿದ್ದ ರಮೇಶ್ ಜಾರಕಿಹೊಳಿ, ಇದೀಗ ಮೂಲ ಬಿಜೆಪಿ ಶಾಸಕರಿಗೂ ಲೀಡರ್ ಆದರಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಸಚಿವ ಸ್ಥಾನ ಗಿಟ್ಟಿಸಲು ರಮೇಶ್ ಜಾರಕಿಹೊಳಿ ಮೂಲಕ ಲಾಬಿಗಿಳಿದರಾ ಮೂಲ ಬಿಜೆಪಿಗರು ಎಂಬ ಪ್ರಶ್ನೆ ಇದೀಗ ಮೂಡುತ್ತಿದ್ದು, ಮೂಲ ಬಿಜೆಪಿ ಆಕಾಂಕ್ಷಿ ಶಾಸಕರ ನಡೆ ಕುತೂಹಲ ಹುಟ್ಟಿಸಿದೆ.

ಸಚಿವ ಸಂಪುಟ ಕಸರತ್ತು ಸನಿಹ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿರುದ್ಧ ಶಾಸಕರು ಒಟ್ಟಾಗಿದ್ದು, ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲು ಗೆದ್ದ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿಗೂ ಶಾಸಕರ ಟೀಂ ಒತ್ತಡ ಹೇರಿದ್ದು, ಯಾವುದೇ ಕಾರಣಕ್ಕೂ ಸಿ.ಪಿ.ಯೋಗೇಶ್ವರ್ ಪರ ಬ್ಯಾಟಿಂಗ್ ನಡೆಸದಂತೆ ಸಾಹುಕಾರ್‍ಗೆ ಒತ್ತಾಯಿಸಿದ್ದಾರೆ. ಇಂದು ನಡೆದ ಸಭೆಯಲ್ಲಿ ಆಕಾಂಕ್ಷಿ ಶಾಸಕರಿಂದ ಒತ್ತಡ ಹೆಚ್ಚಿದೆ. ಹೈಕಮಾಂಡ್ ನಾಯಕರ ಭೇಟಿ ವೇಳೆ ಯೋಗೇಶ್ವರ್ ವಿಚಾರ ಪ್ರಸ್ತಾಪಿಸದಂತೆ ತಿಳಿಸಿದ್ದಾರೆ. ಸಚಿವಾಕಾಂಕ್ಷಿ ಶಾಸಕರ ಒತ್ತಾಯಕ್ಕೆ ಸಾಹುಕಾರ್ ಸಹ ಒಪ್ಪಿದ್ದಾರೆ ಎನ್ನಲಾಗುತ್ತಿದೆ.

ರಮೇಶ್ ಜಾರಕಿಹೊಳಿ ಸಭೆಯಲ್ಲಿ ನಡೆದಿದ್ದೇನು?
ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್‍ಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈ ಕಮಾಂಡ್ ಭೇಟಿ ವೇಳೆ ಮಾತನಾಡಬಾರದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು ರಮೇಶ್ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ. ನೀವು ಆ ಶಾಸಕರ ಬಗ್ಗೆ ಮಾತನಾಡಬಾರದು ಎಂದಿದ್ದಾರೆ. ಈ ವೇಳೆ ನಾನು ಯೋಗೇಶ್ವರ್ ಪರ ಲಾಬಿ ನಡೆಸುವುದಿಲ್ಲ ಎಂದ ರಮೇಶ್ ಜಾರಕಿಹೊಳಿ ಭರಸವೆ ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಯಾವುದೇ ಕಾರಣಕ್ಕೂ ಸಿ.ಪಿ.ಯೋಗೇಶ್ವರ್ ಮಂತ್ರಿಯಾಗಲು ಸಹಾಯ ಮಾಡಬಾರದು. ಸಿಎಂ ಯಡಿಯೂರಪ್ಪ ನಾಯಕತ್ವದಲ್ಲಿ ಎಲ್ಲರೂ ವಿಶ್ವಾಸ ಇರಿಸಬೇಕು. ಯಾವುದೇ ಕಾರಣಕ್ಕೂ ಸಿ.ಪಿ.ಯೋಗೇಶ್ವರ್ ರನ್ನು ಮಂತ್ರಿ ಸ್ಥಾನಕ್ಕೆ ಶಿಫಾರಸು ಮಾಡಬಾರದು. ಸಚಿವ ಸಂಪುಟ ಪುನಾರಚನೆ ಆದಷ್ಟು ಬೇಗ ಮಾಡಿ ಮುಗಿಸಬೇಕು. ಈ ಕುರಿತು ಸಿಎಂಗೆ ಮನವಿ ಮಾಡಲು ಇಂದು ನಡೆಸಿದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *