ಜಮ್ಮು ಸೇನಾ ಸ್ಟೇಷನ್ ಬಳಿ ಕಾಣಿಸಿದ ಡ್ರೋನ್ – ಸೇನೆಯಿಂದ 25 ಸುತ್ತು ಫೈರಿಂಗ್

Public TV
2 Min Read

ಶ್ರೀನಗರ: ಮತ್ತೊಮ್ಮೆ ಡ್ರೋನ್ ದಾಳಿಗೆ ಮುಂದಾಗಿದ್ದ ಉಗ್ರರ ಸಂಚನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಈ ಬಾರಿ ಉಗ್ರರು ಸೇನಾ ಶಿಬಿರವನ್ನ ಗುರಿಯಾಗಿಸಿಕೊಂಡಿದ್ದರು. ಜಮ್ಮು ಏರ್ ಫೋರ್ಸ್ ಸ್ಟೇಶನ್ ಮೇಲಿನ ಡ್ರೋನ್ ದಾಳಿ ಬಳಿಕ ಇಂದು ಮಿಲಿಟರಿ ಸ್ಟೇಶನ್ ಗುರಿ ಮಾಡಿಕೊಂಡಿದ್ದರು.

ಬೆಳಗಿನ ಜಾವ ಮೂರು ಗಂಟೆಗೆ ಕಾಲೂಚಕ್ ಮಿಲಿಟರಿ ಸ್ಟೇಶನ್ ಬಳಿ ಡ್ರೋನ್ ಕಾಣಿಸಿಕೊಳ್ಳುತ್ತಿದ್ದಂತೆ ಅಲರ್ಟ್ ಆಗಿದ್ದ ಸೇನೆ, 20 ರಿಂದ 25 ಸುತ್ತು ಗುಂಡಿನ ದಾಳಿ ನಡೆಸಿದೆ. ಗುಂಡಿನ ದಾಳಿ ಬಳಿಕ ಡ್ರೋನ್ ಮಾಯವಾಗಿದ್ದು, ಸದ್ಯ ಸೇನೆ ಸರ್ಚ್ ಅಪರೇಷನ್ ನಡೆಸುತ್ತಿದೆ. ಗುಂಡಿನ ದಾಳಿಯಲ್ಲಿ ಡ್ರೋನ್ ನ್ನು ಹೊಡೆದುರಳಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಅಧಿಕೃತವಾಗಿ ತಿಳಿದುಬಂದಿಲ್ಲ.

ಏರ್ ಬೇಸ್ ಮೇಲೆ ಎರಡು ಬಾರಿ ದಾಳಿ:
ಜಮ್ಮುವಿನ ಏರ್ ಫೋರ್ಸ್ ಬಳಿ ಭಾನುವಾರ ರಾತ್ರಿ ಎರಡು ಬಾರಿ ದಾಳಿ ನಡೆದಿದೆ. ರಾತ್ರಿ 1.37 ಮತ್ತು ಎರಡನೇಯದ್ದು ಐದು ನಿಮಿಷಗಳ ನಂತರ ಸರಿಯಾಗಿ 1.42 ಗಂಟೆಗೆ ದಾಳಿಯಾಗಿದೆ. ಎರಡೂ ದಾಳಿಯ ಇಂಟೆನ್ಸಿಟಿ ಕಡಿಮೆಯಾಗಿದ್ದರಿಂದ ಸ್ಫೋಟದ ತೀವ್ರತೆ ಕ್ಷೀಣವಾಗಿತ್ತು. ಹಾಗಾಗಿ ಮೇಲ್ಛಾವಣಿಗೆ ಹಾನಿಯಾಗಿತ್ತು.

ಎರಡನೇ ದಾಳಿ ಬಯಲು ಪ್ರದೇಶದಲ್ಲಿ ನಡೆದಿತ್ತು. ಇಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಉಗ್ರರು ಡ್ರೋನ್ ಮೂಲಕ ದಾಳಿ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಎನ್‍ಐಎ ತಂಡ ತಲುಪಿದ್ದು, ತನಿಖೆ ನಡೆಸುತ್ತಿದೆ.

ಡ್ರೋನ್ ದಾಳಿಯಲ್ಲಿ ರಿಸ್ಕ್ ಕಡಿಮೆ:
ಡ್ರೋನ್ ಮುಖಾಂತರ ನಡೆಸುವ ದಾಳಿಯನ್ನ ಕಡಿಮೆ ಹಣದಲ್ಲಿ ನಡೆಸಬಹುದಾಗಿದೆ. ಡ್ರೋನ್ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸೋದರಿಂದ ರಾಡಾರ್ ಸಂಪರ್ಕದಿಂದಲೂ ಅದು ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ. ಮುಂದೆ ಉಗ್ರ ಸಂಘಟನೆಗಳ ಇದೇ ಮಾದರಿಯ ದಾಳಿ ನಡೆಸಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಸದ್ಯ ಭಾರತೀಯ ಸೇನೆ ತಮ್ಮ ಸ್ಥಳಗಳಲ್ಲಿ ಡ್ರೋನ್ ಅಟ್ಯಾಕ್ ತಪ್ಪಿಸಲು ಅಡ್ವಾನ್ಸಡ್ ಟೆಕ್ನಾಲಜಿ ಬಳಕೆ ಮುಂದಗಾಬೇಕಿದೆ. ಇದನ್ನೂ ಓದಿ: SPO ಮನೆಗೆ ನುಗ್ಗಿ ಉಗ್ರರ ಗುಂಡಿನ ದಾಳಿ – ಅಧಿಕಾರಿ, ಪತ್ನಿ, ಮಗಳು ಸಾವು

ಭಾನುವಾರ ರಾತ್ರಿ ಸುಮಾರು 11 ಗಂಟೆಗೆ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಸ್ಪೆಷಲ್ ಪೊಲೀಸ್ ಆಫಿಸರ್ (ಎಸ್‍ಪಿಓ) ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಎಸ್‍ಪಿಓ ಫಯಾಜ್ ಅಹಮದ್ (41) ಮತ್ತು ಅವರ ಪತ್ನಿ ರಾಜಾ ಬೇಗಂ, ಮಗಳು ರಫಿಯಾ (23) ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಜಮ್ಮು ವಾಯು ನೆಲೆ ಮೇಲೆ ಡ್ರೋನ್ ದಾಳಿ – 2 ಸ್ಫೋಟ, ಇಬ್ಬರಿಗೆ ಗಾಯ

ಮಂಗಳವಾರ ಶ್ರೀನಗರದಲ್ಲಿ ಸಿಐಡಿ ಇನ್‍ಸ್ಪೆಕ್ಟರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ನೌಗಾಮ್ ಇಲಾಖೆಯಲ್ಲಿ ಈ ಘಟನೆ ನಡೆದಿತ್ತು. ಶನಿವಾರ ಬರ್ಬರ್ ಶಾ ಇಲಾಖೆಯ ಪೊಲೀಸ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‍ಪಿಎಫ್) ಜಾಯಿಂಟ್ ಪಾರ್ಟಿ ಮೇಲೆ ಉಗ್ರರು ಗ್ರೆನೆಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ನಾಲ್ವರು ಸ್ಥಳೀಯ ನಿವಾಸಿಗಳು ಗಾಯಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *