ಜಮೀರ್‌ ಕ್ಷೇತ್ರಕ್ಕೆ ದಿಢೀರ್‌ 200 ಕೋಟಿ ಅನುದಾನ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌

Public TV
2 Min Read

– ಸಿಎಂ ಪಕ್ಷಪಾತಕ್ಕೆ ಶಾಸಕರ ತೀವ್ರ ಅಸಮಾಧಾನ
– ದಿಢೀರ್ ಜಮೀರ್ ಕ್ಷೇತ್ರಕ್ಕೆ ಇಷ್ಟೊಂದು ಅನುದಾನ ಯಾಕೆ?

ಬೆಂಗಳೂರು: ಸಂಪುಟ ವಿಸ್ತರಣೆ, ಸಿಡಿ ಗದ್ದಲ, ಸೋತ ಸಿ.ಪಿ.ಯೋಗೇಶ್ವರ್‌ಗೆ ಮಂತ್ರಿಗಿರಿ ಕೊಟ್ಟಿರುವುದಕ್ಕೆ ಬಿಜೆಪಿಯಲ್ಲಿ ಅಸಮಾಧಾನ ತಾರಕಕ್ಕೇರಿರೋ ಬೆನ್ನಲ್ಲೇ, ಈದೀಗ ಅನುದಾನ ತಾರತಮ್ಯದ ವಿಚಾರ ಮುನ್ನೆಲೆಗೆ ಬಂದಿದೆ.

ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಕ್ಷೇತ್ರಕ್ಕೆ 200 ಕೋಟಿ ರೂ. ದಯ ಪಾಲಿಸಿರೋದು ವಿವಾದಕ್ಕೀಡುಮಾಡಿದೆ. ಶಾಸಕರ ಕ್ಷೇತ್ರಕ್ಕೆ ಅನುದಾನ ನೀಡೋದು ಸಾಮಾನ್ಯ. ಆದರೆ ತಮ್ಮ ಕ್ಷೇತ್ರಗಳಿಗೆ ಕೇವಲ 20 ಕೋಟಿ ರೂ. ಕೇಳಿದರೂ ಆರ್ಥಿಕ ಕೊರತೆಯ ಸಬೂಬು ಹೇಳುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈಗ ದಿಢೀರನೇ ಜಮೀರ್ ಅಹ್ಮದ್ ಕ್ಷೇತ್ರಕ್ಕೆ 200 ಕೋಟಿ ರೂ. ಅನುದಾನ ಮಂಜೂರು ಮಾಡಿರುವುದು ಯಾಕೆ ಎಂದು ಕೆಲ ಬಿಜೆಪಿ ಶಾಸಕರು ಸಿಟ್ಟಾಗಿದ್ದಾರೆ.

ಸ್ವಪಕ್ಷದ ಶಾಸಕರಿಗಿಂತ ಮುಖ್ಯಮಂತ್ರಿಗಳಿಗೆ ಪರ ಪಕ್ಷದ ಶಾಸಕರ ಮೇಲೇ ಹೆಚ್ಚು ಪ್ರೀತಿನಾ ಎಂದು ಬಿಜೆಪಿಯ ಕೆಲ ಉತ್ತರ ಕರ್ನಾಟಕ ಶಾಸಕರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಶಾಸಕ ಜಮೀರ್ ಮೇಲಿನ ಪ್ರೀತಿಗೆ ನಿನ್ನೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದ `ಆ’ ಮಾತೇ ನಿಜನಾ ಎಂದು ಪ್ರಶ್ನೆ ಮಾಡಿದ್ದಾರೆ.

ಕೆಲ ಆರ್‍ಎಸ್‍ಎಸ್ ನಾಯಕರೂ ಮುಖ್ಯಮಂತ್ರಿಗಳ `ಪರ ಪಕ್ಷದ’ ಮೇಲಿನ ಪ್ರೀತಿಗೆ ಅಸಮಾಧಾನಗೊಂಡಿದ್ದಾರೆ. ನಾಳೆ ಬೆಂಗಳೂರಿಗೆ ಭೇಟಿ ಕೊಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಮನಕ್ಕೂ ತರಲು ಬಯಸಿದ್ದಾರೆ ಎನ್ನಲಾಗಿದೆ.

ಅನುದಾನದ ವಿವರ
ಜಮೀರ್ ಕ್ಷೇತ್ರಕ್ಕೆ ಒಟ್ಟು 200 ಕೋಟಿ ರೂ. ಅನುದಾನ ನೀಡಲಾಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಕಳೆದ ಡಿಸೆಂಬರ್ 9ರಂದು ಸಿಎಂಗೆ ಜಮೀರ್ ಪತ್ರ ಬರೆದಿದ್ದಾರೆ. ಜಮೀರ್ ಬರೆದ ಪತ್ರಕ್ಕೆ ಕೇವಲ ಎಂಟೇ ದಿನದಲ್ಲಿ ಸಿಎಂ ಸಹಿ ಹಾಕಿದ್ದಾರೆ. ಡಿ.16ರಂದು 200 ಕೋಟಿ ಮಂಜೂರಿಗೆ ಸಿಎಂ ಸಹಿ ಹಾಕಿದ್ದಾರೆ. ಹಣಕಾಸು ಇಲಾಖೆಗೆ ಡಿ.18ರಂದು ಸಿಎಂ ಶಿಫಾರಸ್ಸು ಪತ್ರ ರವಾನಿಸಲಾಗಿದೆ.

ಬಿಜೆಪಿ ಶಾಸಕರ ಪ್ರಶ್ನೆ ಏನು?
ಸಿಎಂ ಈ ಪರ ಪಕ್ಷ ಶಾಸಕರ ಪ್ರೇಮವನ್ನು ಪ್ರಶ್ನಿಸಿ ಉತ್ತರ ಕರ್ನಾಟಕದ ಕೆಲ ಶಾಸಕರು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಮಂತ್ರಿಗಿರಿಯಲ್ಲೂ ಬೆಂಗಳೂರಿಗೆ ಅಗ್ರ ತಾಂಬೂಲ, ನಮಗೆ ಬಿಡಿಗಾಸು, ಕಾಂಗ್ರೆಸ್ ಶಾಸಕನ ಕ್ಷೇತ್ರಕ್ಕೆ ಬಂಪರ್, ಬಿಜೆಪಿ ಶಾಸಕರ ಅನುದಾನ ಕಡತಗಳು ಏಕೆ ಪಾಸ್ ಆಗುತ್ತಿಲ್ಲ? ಅನುದಾನ ಪಡೆಯಲು, ನಿಮ್ಮ ಪ್ರೀತಿ ಗಳಿಸಲು ನಾವು ಏನು ಮಾಡಬೇಕು? ಉತ್ತರ ಕರ್ನಾಟಕದ ಶಾಸಕರ ಮೇಲೆ ಮಲತಾಯಿ ಧೋರಣೆ ಸರಿಯೇ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ ಎನ್ನಲಾಗಿದೆ.

ಆರ್‍ಎಸ್‍ಎಸ್ ಪ್ರಶ್ನೆ?
ಅನುದಾನಕ್ಕಾಗಿಯೇ ಬಿಜೆಪಿ ಶಾಸಕರು ನಿಮ್ಮನ್ನ ಪ್ರಶ್ನಿಸಿದ್ದು ಮರೆತುಹೋಯಿತೇ? ಬಿಜೆಪಿ ಶಾಸಕರಿಗೆ ಹೆಚ್ಚು ಅನುದಾನಕ್ಕೆ 2 ವರ್ಷ ಕಾಯಿರಿ ಎಂದಿದ್ದು ನೆನಪಿದ್ಯಾ, ನಮ್ಮ ಶಾಸಕರಿಗೆ ಕಾಸಿಲ್ಲ ಅಂದವರಿಗೆ ಈಗ ಕಾಸು ಎಲ್ಲಿಂದ ಬಂತು, ವಾಚ್‍ಮೆನ್ ಆಗ್ತೀನಿ ಅಂತ ಚಾಲೆಂಜ್ ಮಾಡಿದವರ ಮೇಲೆ ಏಕೆ ಪ್ರೀತಿ? ಯಾರ, ಯಾವುದರ ಒತ್ತಡಕ್ಕೆ ಮಣಿದ್ರಿ ಯಡಿಯೂರಪ್ಪನವರೇ ಎಂದು ಆರ್‌ಎಸ್‌ಎಸ್‌ ಪ್ರಶ್ನಿಸಿದೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *