ಜನ ಆಕ್ಸಿಜನ್‍ಗಾಗಿ ಅಳ್ತಿದ್ದಾರೆ, ನಾಯಕರು ರ‍್ಯಾಲಿಯಲ್ಲಿ ನಗ್ತಿದ್ದಾರೆ: ಪ್ರಿಯಾಂಕಾ ಗಾಂಧಿ

Public TV
2 Min Read

ನವದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಜನ ಆಕ್ಸಿಜನ್ ಗಾಗಿ ಆಸ್ಪತ್ರೆಗಳಲ್ಲಿ ಕ್ಯೂ ನಿಂತು ಬೇಡಿಕೊಳ್ಳುತ್ತಿದ್ದಾರೆ. ಆದರೆ ಇತ್ತ ನಮ್ಮ ರಾಜಕೀಯ ನಾಯಕರು ಮಾತ್ರ ಚುನಾವಣಾ ರ‍್ಯಾಲಿಯಲ್ಲಿ ನಗುತ್ತಿದ್ದಾರೆ ಎಂದು ನಾಯಕರ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಗುಡುಗಿದ್ದಾರೆ.

ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜಕೀಯ ನಾಯಕರು ಇಂದು ಕೂಡ ಚುನಾವಣೆಯ ರ‍್ಯಾಲಿಯಲ್ಲಿ ಭಾಗವಹಿಸಿಕೊಂಡು ವೇದಿಕೆ ಮೇಲೆ ನಗುತ್ತಿದ್ದಾರೆ. ಆದರೆ ಇತ್ತ ದೇಶದ ಜನ ಕೊರೊನಾದಿಂದಾಗಿ ಅಳುತ್ತಿದ್ದು, ಆಕ್ಸಿಜನ್, ಆಸ್ಪತ್ರೆಗಳಲ್ಲಿ ಬೆಡ್, ಔಷಧಿಗೋಸ್ಕರ ನರಳಾಡುತ್ತಿದ್ದಾರೆ. ಜನ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಆದರೆ ಸರ್ಕಾರದ ನಾಯಕರು ಮಾತ್ರ ರ‍್ಯಾಲಿಗಳಲ್ಲಿ ಭಾಗಿಯಾಗುತ್ತಾ ನಗುತ್ತಿದ್ದಾರೆ. ದೇಶದಲ್ಲಿ ಉಂಟಾಗಿರುವ ಭೀಕರ ಆರೋಗ್ಯ ತುರ್ತು ಪರಿಸ್ಥಿತಿ ಬಗ್ಗೆ ಅವರಿಗೆ ಅರಿವೆ ಇಲ್ಲದವರಂತೆ ಇದ್ದಾರೆ ಎಂದು ಟೀಕಿಸಿದ್ದಾರೆ.

ಇಂದು ಕೋವಿಡ್-19ನಿಂದಾಗಿ ದೇಶದ ಜನ ನರಳಾಟದಲ್ಲಿದ್ದರೆ, ಇತ್ತ ಕೇಂದ್ರ ಸರ್ಕಾರ ಪಶ್ಚಿಮಬಂಗಾಳದಲ್ಲಿ ಚುನಾವಣೆ ರ‍್ಯಾಲಿ ನಡೆಸುತ್ತಿದೆ. ಸರ್ಕಾರದ ನಾಯಕರು ಕೂಡ ಚುನಾವಣಾ ಪ್ರಚಾರ ನಡೆಸುತ್ತಿದ್ದು, ರ‍್ಯಾಲಿಗಳಲ್ಲಿ ವೇದಿಕೆ ಮೇಲೆ ನಿಂತುಕೊಂಡು ವಿರೋಧ ಪಕ್ಷವನ್ನು ಟೀಕಿಸುತ್ತಾ ಕಾಲಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಭಾರತದಲ್ಲಿ ಆಕ್ಸಿಜನ್ ಉತ್ಪಾದನೆ ವಿಶ್ವದಲ್ಲಿಯೇ ಬೃಹತ್ ಪ್ರಮಾಣದಲ್ಲಿದೆ. ಹೀಗಿರುವಾಗ ಆಕ್ಸಿಜನ್ ಕೊರತೆ ಹೇಗೆ ಉಂಟಾಯಿತು. ಕೊರೊನಾ ಮೊದಲ ಅಲೆ ಭಾರತದಲ್ಲಿ ಕಾಣಿಸಿಕೊಂಡು ಕಡಿಮೆಯಾಗಿ ಎರಡನೇ ಅಲೆ ಪ್ರಾರಂಭವಾಗುವ ಮಧ್ಯೆ 8 ರಿಂದ 9 ತಿಂಗಳು ಸಮಯವಿತ್ತು. ಇದರೊಂದಿಗೆ ಸರ್ಕಾರದ ಸಮೀಕ್ಷೆಯ ಪ್ರಕಾರ ಎರಡನೇ ಅಲೆ ತೀವ್ರವಾಗಿದೆ ಎಂದು ಮಾಹಿತಿ ಇತ್ತು. ಆದರೆ ಸರ್ಕಾರ ಮಾತ್ರ ಅದನ್ನು ನಿರ್ಲಕ್ಷ್ಯ ಮಾಡಿ ಕೈ ಕಟ್ಟಿ ಕುಳಿತಿತ್ತು ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶವಿತ್ತು ಆದರೆ ಇಂದು ಭಾರತ ಕೇವಲ 2 ಸಾವಿರ ಟ್ರಕ್ ನಷ್ಟು ಮಾತ್ರ ಆಕ್ಸಿಜನ್ ನ್ನು ಸಾಗಾಟ ಮಾಡಬಹುದಾಗಿದೆ. ಆಕ್ಸಿಜನ್ ನಮ್ಮಲ್ಲಿ ಇದೆ, ಆದರೆ ಅದು ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪುತ್ತಿಲ್ಲ. ಕಳೆದ ಆರು ತಿಂಗಳಲ್ಲಿ 1.1 ಮಿಲಿಯನ್ ರೆಮೆಡಿಸಿವಿರ್ ರಫ್ತಾಗಿದೆ. ಆದರೆ ಇದೀಗ ನಾವೇ ಕೊರತೆ ಎದುರಿಸುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕಳೆದ ಜನವರಿಯಿಂದ ಮಾರ್ಚ್ ನಡುವೆ 6 ಕೋಟಿ ಲಸಿಕೆಗಳನ್ನು ರಫ್ತು ಮಾಡಿದೆ. ಈ ಸಮಯದಲ್ಲಿ 3ರಿಂದ 4 ಕೋಟಿ ಭಾರತೀಯರಿಗೆ ಲಸಿಕೆ ಹಾಕಲಾಗಿದೆ. ಮೊದಲು ನಮ್ಮ ದೇಶದವರಿಗೆ ಆದ್ಯ ಕೊಡಬೇಕಾಗಿತ್ತು. ನಂತರ ಇತರ ದೇಶಗಳಿಗೆ ರಫ್ತು ಮಾಡಬೇಕಾಗಿತ್ತು. ಇದು ಸರ್ಕಾರದ ತಪ್ಪು ನಿರ್ಧಾರ, ಸರಿಯಾದ ಯೋಜನೆಯಿಲ್ಲದೆ ದೇಶದಲ್ಲಿ ರೆಮೆಡಿಸಿವಿರ್, ಲಸಿಕೆ ಮತ್ತು ಆಕ್ಸಿಜನ್ ಕೊರತೆಯುಂಟಾಗಿದೆ ಎಂದು ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *