ಜನಸಂಖ್ಯೆಗೆ ಹೋಲಿಸಿದ್ರೆ ಭಾರತದಲ್ಲಿ ಅತೀ ಕಡಿಮೆ ಕೊರೊನಾ ಪ್ರಕರಣ: WHO ವರದಿ

Public TV
2 Min Read

ನವದೆಹಲಿ: ಪ್ರತಿ ಹತ್ತು ಲಕ್ಷ ಜನರಲ್ಲಿ 505.37 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಭಾರತ ಅತೀ ಕಡಿಮೆ ಕೊರೊನಾ ಪ್ರಕರಣ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸ್ಥಿತಿಗತಿ ಕುರಿತು ಜುಲೈ 6ರಂದು ವರದಿ ಬಿಡುಗಡೆ ಮಾಡಿದ್ದು, ಪ್ರತಿ 10 ಲಕ್ಷ ಜನರಲ್ಲಿ ಎಷ್ಟು ಮಂದಿಗೆ ಸೋಂಕು ತಗುಲಿದೆ, ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬ ಅಂಕಿ ಅಂಶವನ್ನು ತಿಳಿಸಿದೆ. ವರದಿ ಪ್ರಕಾರ ಭಾರತ ಪ್ರತಿ 10 ಲಕ್ಷ ಜನರಲ್ಲಿ ಅತೀ ಕಡಿಮೆ ಪ್ರಕರಣ ಹೊಂದಿದ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಸರಾಸರಿ 505.37 ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ವಿಶ್ವದಲ್ಲಿ ಪ್ರತಿ 10 ಲಕ್ಷ ಜನರಲ್ಲಿ ಸರಾಸರಿ 1453.25 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ದಕ್ಷಿಣ ಅಮೆರಿಕದ ಚೈಲ್‍ನಲ್ಲಿ ಪ್ರತಿ ಮಿಲಿಯನ್ ಜನರ ಪೈಕಿ 15,459.8 ಪ್ರಕರಣಗಳು ಪತ್ತೆಯಾಗಿವೆ. ಅದೇ ರೀತಿ ಪ್ರತಿ ಮಿಲಿಯನ್ ಜನರ ಪೈಕಿ ಪೆರು 9070.8, ಅಮೆರಿಕ 8560.5, ಬ್ರೆಜಿಲ್ 7419.1, ಹಾಗೂ ಸ್ಪೇನ್ 5358.7 ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ.

ಭಾರತದಲ್ಲಿ ಪ್ರತಿ ಹತ್ತು ಲಕ್ಷ ಜನರ ಪೈಕಿ ಸೋಂಕು ತಗುಲಿದ ಪ್ರಕರಣಗಳು ಕಡಿಮೆಯಾಗಿದ್ದು, ಅದೇ ರೀತಿ ಸಾವಿನ ಪ್ರಮಾಣ ಸಹ ತೀರಾ ಕಡಿಮೆ ಇದೆ ಎಂದು ಡಬ್ಲ್ಯುಎಚ್‍ಒ ತನ್ನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಪ್ರತಿ ಹತ್ತು ಲಕ್ಷ ಜನರ ಪೈಕಿ ಕೊರೊನಾದಿಂದಾಗಿ 14.27 ಜನ ಸಾವನ್ನಪ್ಪುತ್ತಿದ್ದಾರೆ. ವಿಶ್ವ ಮಟ್ಟದಲ್ಲಿ ಇದರ ನಾಲ್ಕು ಪಟ್ಟು ಜನ ಸಾವನ್ನಪ್ಪುತ್ತಿದ್ದು, ಪ್ರತಿ ಮಿಲಿಯನ್‍ಗೆ 68.29ರಷ್ಟು ಜನ ಸಾವನ್ನಪ್ಪುತ್ತಿದ್ದಾರೆ.

ಕೊರೊನಾ ವಿರುದ್ಧದ ಸಮರದಲ್ಲಿ ಭಾರತ ಪ್ರಕರಣಗಳನ್ನು ಅಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಲು ಆಸ್ಪತ್ರೆಯ ಮೂಲಸೌಕರ್ಯಗಳನ್ನು ಹೆಚ್ಚಿಸಿದೆ. ಕೊರೊನಾ ವಿರುದ್ಧ ಹೋರಾಡಲು ಪೂರ್ವ ಸಿದ್ಧತೆಯ ಭಾಗವಾಗಿ ಆಮ್ಲಜನಕ, ಐಸಿಯು ಹಾಗೂ ವೆಂಟಿಲೇಟರ್ ಸೌಲಭ್ಯಗಳನ್ನು ಹೆಚ್ಚಿಸಿದೆ.

ಜುಲೈ 7ರ ಅಂಕಿ ಅಂಶದ ಪ್ರಕಾರ ದೇಶದಲ್ಲಿ 1,201 ಆಸ್ಪತ್ರೆಗಳನ್ನು ಕೊರೊನಾಗಾಗಿ ಮೀಸಲಿರಿಸಲಾಗಿದೆ. 2,611 ಕೊರೊನಾ ಹೆಲ್ತ್ ಕೇರ್ ಸೆಂಟರ್ ಗಳನ್ನು ಸ್ಥಾಪಿಸಲಾಗಿದೆ. ಅತೀ ಕಡಿಮೆ ರೋಗ ಲಕ್ಷಣಗಳನ್ನು ಹೊಂದಿರುವ ಸೋಂಕಿತರಿಗಾಗಿ 9,909 ಕೋವಿಡ್ ಕೇರ್ ಸೆಂಟರ್‍ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಕಳೆದ 24 ಗಂಟೆಗಳಲ್ಲಿ 15,515 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ವರಗೆ ದೇಶದಲ್ಲಿ 4.40 ಲಕ್ಷ ಜನ ಗುಣಮುಖರಾಗಿದ್ದಾರೆ.

ಈ ಕುರಿತು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕೊರೊನಾವೈರಸ್ ತಡೆಗಟ್ಟುವಿಕೆ, ನಿಯಂತ್ರಣ ಹಾಗೂ ನಿರ್ವಹಣೆಗಾಗಿ ರಾಷ್ಟ್ರೀಯ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ. ಸಕ್ರಿಯ ಪ್ರಕರಣಗಳು ಹಾಗೂ ಗುಣಮುಖವಾಗುತ್ತಿರುವ ಪ್ರಕರಣಗಳಲ್ಲಿ ಅಂತರ ಕಾಯ್ದುಕೊಳ್ಳುವ ಮೂಲಕ ಉತ್ತಮ ಫಲಿತಾಂಶ ಲಭ್ಯವಾಗುತ್ತಿದೆ. ಜುಲೈ 7ರಂದು 1,80,390 ಜನ ಗುಣಮುಖರಾಗಿದ್ದು, ಇದು ಸಕ್ರಿಯ ಪ್ರಕರಣಗಳಿಗಿಂತ ಹೆಚ್ಚಿದೆ. ಅಲ್ಲದೆ ಇಂದು ಗುಣಮುಖರಾಗಿರುವ ಪ್ರಮಾಣ ಶೇ.61.13ರಷ್ಟಿದೆ ಎಂದು ತಿಳಿಸಿದೆ.

ಪ್ರಸ್ತುತ ಭಾರತದಲ್ಲಿ 2,59,557 ಅಕ್ರಿಯ ಪ್ರಕರಣಗಳಿದ್ದು, ಎಲ್ಲರೂ ವೈದ್ಯಕೀಯ ಚಿಕಿತ್ಸೆಯಲ್ಲಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,41,430 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಈ ವರೆಗೆ ದೇಶದಲ್ಲಿ 1.02 ಕೋಟಿ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *