ಜನವರಿ ಅಂತ್ಯದಿಂದ ಕಂಬಳ ಪ್ರಾರಂಭ: ಕಟೀಲ್

Public TV
1 Min Read

ಮಂಗಳೂರು:ಕರಾವಳಿ ಭಾಗದ ಜಾನಪದ ಕ್ರೀಡೆಯಾದ ಕಂಬಳವನ್ನು ಈ ಬಾರಿ ಕೋವಿಡ್ ಮಾರ್ಗಸೂಚಿಗಳನ್ನು ಚಾಚು ತಪ್ಪದೆ ಅನುಸರಿಸುವುದರೂಂದಿಗೆ ಆಯೋಜಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಸ್ತುತ ಸಾಲಿನ ಕಂಬಳ ಕ್ರೀಡೆಯನ್ನು ಜಿಲ್ಲೆಯಲ್ಲಿ ಆಯೋಜಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಂಬಳ ಕರಾವಳಿ ಕರ್ನಾಟಕ ಭಾಗದ ಒಂದು ಜಾನಪದ ಕ್ರೀಡೆಯಾಗಿದ್ದು ಕರಾವಳಿ ಭಾಗದ ರೈತಾಪಿ ಜನರು ನವೆಂಬರ್- ಡಿಸೆಂಬರ್ ಮಾಸದಲ್ಲಿ ಭತ್ತದ ಕೊಯ್ಲಿನ ನಂತರದಿಂದ ಫೆಬ್ರವರಿ-ಮಾರ್ಚ್ ಮಾಯೆಯ ವರೆಗೆ ತಮ್ಮ ಮನೋರಂಜನೆಗಾಗಿ ಸಾಂಘಿಕ ಬಲದೂಂದಿಗೆ ಕಂಬಳವನ್ನು ನಡೆಸುತ್ತಾರೆ ಎಂದರು.

ಕಂಬಳಕ್ಕೆ ನೂರಾರು ವರ್ಷದ ಇತಿಹಾಸವಿದ್ದು ರಾಜಮಹಾರಾಜರುಗಳು ಪ್ರೋತ್ಸಾಹ ನೀಡಿದ್ದಾರೆ ಎಂದ ಅವರು ಈ ಬಾರಿ ಕೋವಿಡ್ ಸೋಂಕಿನಿಂದಾಗಿ ರೈತರು ಜನವರಿ ಅಂತ್ಯವಾದರೂ ಪ್ರಾರಂಭಿಸಿಲ್ಲ. ಆಯೋಜಕರು ಕೋವಿಡ್ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸುವುದರೊಂದಿಗೆ ಜನವರಿ 30 ರಿಂದ  ಜಿಲ್ಲೆಯಲ್ಲಿ 10 ಕಂಬಳ ಕಾರ್ಯಕ್ರಮವನ್ನು ಏರ್ಪಡಿಸಬಹುದಾಗಿದೆ ಎಂದರು .

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ .ವಿ ಮಾತನಾಡಿ, ಕೋವಿಡ್ ಸಂದರ್ಭವಾದ ಈ ದಿನಗಳಲ್ಲಿ ಅತಿ ಹೆಚ್ಚು ಜಾಗ್ರತೆ ವಹಿಸಬೇಕು, ಹೆಚ್ಚು ಜನರು ಸೇರಿದಂತೆ ಕ್ರಮವಹಿಸಬೇಕು. ರಾತ್ರಿ ಹತ್ತು ಗಂಟೆಯ ಒಳಗಾಗಿ ಕಂಬಳ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕು. ಕಾರ್ಯಕ್ರಮಕ್ಕೆ ವಯಸ್ಸಾದವರು ಮತ್ತು ಮಕ್ಕಳು ಭಾಗವಹಿಸದಂತೆ ಎಚ್ಚರವಹಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಿದರು.

ಕಂಬಳ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತ ವಿಧಿಸುವ ಎಲ್ಲಾ ನಿಯಮಗಳನ್ನು ಹಾಗೂ ಎಲ್ಲಾ ಮಾರ್ಗಸೂಚಿಗಳನ್ನು ಶಿಸ್ತುಬದ್ಧವಾಗಿ ಜರಗಿಸಲು ಹೆಚ್ಚಿನ ಕಾರ್ಯಕರ್ತರನ್ನು ತೊಡಗಿಸಿಕೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಸದಸ್ಯ ಉಮಾನಾಥ್ ಕೋಟ್ಯಾನ್, ಮಂಗಳೂರು ವಿಧಾನ ಸಭಾ ಸದಸ್ಯ ಯು .ಟಿ ಖಾದರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್, ಉಪ ಪೊಲೀಸ್ ಆಯುಕ್ತ ವಿನಯ್ ಗಾವಂಕರ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಟಿ. ಜಿ. ಪ್ರಸನ್ನ ಹಾಗೂ ಕಂಬಳ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *