ಜನವರಿಯಿಂದಲೇ ಶಾಲಾ ಕಾಲೇಜು ಆರಂಭ ಫಿಕ್ಸ್: ಸುರೇಶ್ ಕುಮಾರ್

Public TV
2 Min Read

ಬೆಂಗಳೂರು: ಬ್ರಿಟನ್ ರೂಪಾಂತರಿ ವೈರಸ್ ಕಂಡು ಬಂದಿರುವ ಹಿನ್ನೆಲೆ ರಾಜ್ಯದಲ್ಲಿ ಶಾಲಾ ಕಾಲೇಜುಗಳು ನಿಗದಿತ ಸಮಯಕ್ಕೆ ಆರಂಭವಾಗುತ್ತಾ ಇಲ್ವಾ? ಎಂಬ ಗೊಂದಲಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ ಸುಧಾಕರ್, ರಾಜ್ಯದ ಉನ್ನತ ಶಿಕ್ಷಣ ಸಿಚಿವ ಸಿ.ಅಶ್ವಥ್ ನಾರಾಯಣ್ ಎಲ್ಲರೂ ತಿಳಿಸಿರುವಂತೆ ಜನವರಿ 1 ರಿಂದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ತರಗತಿಗಳು ಪ್ರಾರಂಭವಾಗುತ್ತದೆ ಜೊತೆಗೆ 6, 7 ಮತ್ತು 8 ತರಗತಿಗಳಿಗೆ ವಿದ್ಯಾಗಮ ಮಾಡುವುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ಮುಂಚೆ ಆರೋಗ್ಯ ಸಚಿವರು ಮತ್ತು ಮತ್ತು ತಾಂತ್ರಿಕ ಸಲಹ ಸಮಿತಿಯವರು ತಿಳಿಸಿದಂತೆ ಬ್ರಿಟನ್ ವೈರಾಣು ಕುರಿತಂತೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕೋವಿಡ್‍ಗೆ ನಾವು ಯಾವ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೆವು ಅದೇ ಚಿಕಿತ್ಸೆಯನ್ನೇ ಇದಕ್ಕೂ ಪಡೆದುಕೊಳ್ಳಬಹುದು. ಕೊರೊನಾಗೆ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮ ಅನುಸರಿಸುತ್ತಿದ್ದೆವೋ ಅದೇ ನಿಯಮವನ್ನು ಬ್ರಿಟನ್ ವೈರಸ್‍ಗೂ ಪಾಲಿಸಿದರೆ ಸಾಕು ಎಂದರು.

ಶಾಲೆ ಪ್ರಾರಂಭಿಸಲು ಈಗಾಗಲೇ ಶಾಲೆಗಳನ್ನು ಶುಚಿಗೊಳಿಸಿ ಸ್ಯಾನಿಟೈಸ್ ಮಾಡಿಸಲಾಗಿದ್ದು, ಶಾಲಾ-ಕಾಲೇಜುಗಳಲ್ಲಿ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆಗೊಳಿಸಲಾಗಿದೆ. ಹಾಗೂ ತರಗತಿಯಲ್ಲಿ ಎಷ್ಟು ಜನ ಮಕ್ಕಳನ್ನು ಕೂರಿಸಬೇಕು ಎಂಬುದರ ಬಗ್ಗೆ ಯೋಚನೆ ಕೂಡ ಮಾಡಿದ್ದೇವೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಶಾಲೆಗಳ ಕುರಿತಂತೆ ಮೇಲ್ವಿಚಾರಣೆ ನಡೆಸಿ ಬೇಕಾದ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ಹಲವು ರೀತಿಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದ್ದೇವೆ.

ಇಂದಿನಿಂದ ಬೆಂಗಳೂರಿನ ಹೊರವಲಯದಲ್ಲಿರುವ ಕೆಲವು ಕಾಲೇಜು ಮತ್ತು ಶಾಲೆಗಳಿಗೆ ಸ್ವತಃ ನಾನೇ ಭೇಟಿ ನೀಡಿ ಅಲ್ಲಿನ ಸಿದ್ಧತೆಗಳ ಕುರಿತಂತೆ ಪರಿಶೀಲಿಸುತ್ತೇನೆ ಎಂದು ತಿಳಿಸಿದರು. ಇನ್ನೂ ಸೋಂಕಿನ ಬಗ್ಗೆ ಆರೋಗ್ಯ ಸಚಿವರ ಮೂಖಾಂತರ ತಜ್ಞರ ಜೊತೆ ಮಾತನಾಡಿದ್ದು, ಅವರು ಕೂಡ ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಿದ್ದಾರೆ.

ಪೋಷಕರು ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳುಹಿಸಿ ಕೊಡಿ. ನಿಮಗೆ ಏನಾದರೂ ಆತಂಕವಿದ್ದು, ಇಚ್ಛಿಸದಿದ್ದರೆ ಅದಕ್ಕೂ ಕೂಡ ನಿಮಗೆ ಅವಕಾಶವಿದೆ. ನಮ್ಮ ವ್ಯವಸ್ಥೆಯ ಬಗೆಗೆ ಧೈರ್ಯವಿದ್ದು ವಿಶ್ವಾಸವಿದ್ದರೆ, ಮಕ್ಕಳನ್ನು ದಯವಿಟ್ಟು ಶಾಲೆಗೆ ಕಳುಹಿಸಿ. ನಿಮ್ಮ ಮಕ್ಕಳನ್ನು ನಿಮ್ಮ ಮನೆಯಲ್ಲಿ ಯಾವ ರೀತಿ ನೋಡಿಕೊಳ್ಳುವಿರೋ ಅದೇ ರೀತಿ ನಮ್ಮ ಮಕ್ಕಳಂತೆ ಶಾಲೆಯಲ್ಲಿ ನೋಡಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *