ಜನರೇ ಗಮನಿಸಿ, ಕೊರೊನಾ ಸೋಂಕಿತರ ಸಾವಿಗೆ ವಾಯುಮಾಲಿನ್ಯವೂ ಕಾರಣ

Public TV
1 Min Read

ನವದೆಹಲಿ: ಜನರೇ ವಾತಾವರಣವನ್ನು ಸ್ವಚ್ಛವಾಗಿರಿಸಿ. ಯಾಕೆಂದರೆ ಕೊರೋನಾ ಸಾವಿಗೆ ವಾಯುಮಾಲಿನ್ಯವೂ ಈಗ ಕಾರಣವಾಗಿರುವುದು ಅಧ್ಯಯನದಿಂದ ದೃಢಪಟ್ಟಿದೆ.

ಮಾಲಿನ್ಯದ ಜೊತೆ ಸೇರಿ ಕೊರೋನಾ ಪ್ರಾಣಕ್ಕೆ ಕುತ್ತು ತರಬಹುದು ಹುಷಾರ್ ಅಂತ ಕೇಂದ್ರ ಆರೋಗ್ಯ ಇಲಾಖೆ ಹಾಗೂ ಐಸಿಎಂಆರ್ ಆತಂಕ ವ್ಯಕ್ತಪಡಿಸಿದೆ. ವಿದೇಶಗಳಲ್ಲಿ ನಡೆಸಿದ ಅಧ್ಯಯನದ ಮೇಲೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಾಹಿತಿಯನ್ನು ಹಂಚಿಕೊಂಡಿದೆ.

ಏನಿದು ಅಧ್ಯಯನ?
ಯುರೋಪ್, ಅಮೆರಿಕದ ಅಧ್ಯಯನದ ಪ್ರಕಾರ ಕಲುಷಿತ ಗಾಳಿಯೂ ಕೊರೊನಾ ರೋಗಿಗಳ ಸಾವಿಗೆ ಕಾರಣವಾಗುತ್ತಿದೆ. ತಂಬಾಕು ಸೇವನೆ, ಅಧಿಕ ರಕ್ತದೊತ್ತಡ ಬಳಿಕ ಮಾಲಿನ್ಯದಿಂದ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ಹಲವು ಕಲುಷಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿರುವ ಅಧ್ಯಯನ ತಂಡಗಳು ಕೆಟ್ಟ ಗಾಳಿಯಿಂದ ಉಸಿರಾಟದ ಸಮಸ್ಯೆಯಾಗಿ ಸಾವು ಸಂಭವಿಸಬಹುದು. ವಾಯುಮಾಲಿನ್ಯ, ಕೊರೋನಾದಿಂದ ಪಾರಾಗಲು ಮಾಸ್ಕ್ ಒಂದೇ ಮಾರ್ಗ ಎಂದು ಐಸಿಎಂಆರ್ ಡಿಜಿ ಡಾ. ಬಲರಾಮ್ ಭಾರ್ಗವ ತಿಳಿಸಿದ್ದಾರೆ.

ಮತ್ತೆ ಆತಂಕ:
ದೆಹಲಿ, ಪಂಜಾಬ್‍ನಲ್ಲಿ ಈಗ ಚಳಿ ಹೆಚ್ಚಾಗುತ್ತಿದ್ದು ಕೃಷಿ ತಾಜ್ಯವನ್ನು ಹೆಚ್ಚು ಸುಡಲಾಗುತ್ತಿದೆ. ಇದರಿಂದ ಪ್ರತಿ ವರ್ಷದಂತೆ ಈಗ ರಾಜ್ಯಗಳಲ್ಲಿ ವಾಯು ಮಾಲಿನ್ಯ ಪ್ರಮಾಣದ ಹೆಚ್ಚಾಗುತ್ತಿದೆ. ಇದರ ಜೊತೆ ಮುಂದಿನ ತಿಂಗಳು ದೀಪಾವಳಿ ಬರಲಿದೆ.

ದೀಪಾವಳಿ ಸಮಯದಲ್ಲಿ ಪಟಾಕಿ ಸುಡುವುದು ಸಾಮಾನ್ಯ. ದೀಪಾವಳಿ ಸಮಯದಲ್ಲಿ ಯಾವಾಗಲೂ ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚಿರುತ್ತದೆ. ಆದರೆ ಈ ಬಾರಿ ಕೊರೊನಾ ಸೋಂಕು ಇದ್ದು, ಅದರಲ್ಲೂ ನಗರ ಪ್ರದೇಶಗಳಲ್ಲಿ ಹೆಚ್ಚು ಸೋಂಕಿತರಿದ್ದಾರೆ. ಕೊರೊನಾ ಸೋಂಕು ಶ್ವಾಸಕೋಶಕ್ಕೆ ಅಪಾಯ ತರುವ ಕಾರಣ ಈಗ ಮತ್ತೆ ಆತಂಕ ಎದುರಾಗಿದೆ.

Share This Article
Leave a Comment

Leave a Reply

Your email address will not be published. Required fields are marked *