ಕಾರವಾರ: ಕೋವಿಡ್ ನಿಂದ ಗುಣಮುಖನಾಗಿದ್ದರೂ ಸಮಾಜವು ತನ್ನನ್ನು ತಾತ್ಸಾರ ಹಾಗೂ ಸಂಶಯದಿಂದ ನೋಡುತ್ತಿರುವ ಕಾರಣಕ್ಕೆ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರವಾರದ ಶಿರವಾಡದಲ್ಲಿ ನಡೆದಿದೆ.
ಶಿರವಾಡದ ಹೆಳೆಕೋಟ್ ನಿವಾಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ತಿಂಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತು. ನಂತರ ಚಿಕಿತ್ಸೆ ಪಡದು ಗುಣಮುಖರಾಗಿ ಮನೆಗೆ ಬಂದಿದ್ದರು. ಆದರೆ ಗ್ರಾಮಸ್ಥರು ಇವರನ್ನು ಅನುಮಾನ ಮತ್ತು ತಾತ್ಸಾರವಾಗಿ ನೋಡಲು ಆರಂಭಿಸಿದ್ದರು.
ನೆರೆಹೊರೆಯವರ ವರ್ತನೆಯಿಂದ ನೊಂದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆಯ ಪಿಎಸ್‍ಐ ರೇವಣ ಸಿದ್ದಪ್ಪ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.