ಜೈಪುರ: ತಾಯಿ ಇಲ್ಲದ ಐದು ವರ್ಷದ ಬಾಲಕಿಯ ಸನ್ನೆಯೇ ಆಕೆಯ ಒಪ್ಪಿಗೆ ಎಂದು ತಿಳಿದು ಆಕೆಯನ್ನು ಚಿಕ್ಕಮ್ಮಳ ವಶಕ್ಕೆ ಕೋರ್ಟ್ ಒಪ್ಪಿಸಿದ ಅಪರೂಪದ ಪ್ರಕರಣ ರಾಜಸ್ಥಾನದಲ್ಲಿ ನಡೆದಿದೆ.
ನ್ಯಾಯಾಧೀಶ ಸಂದೀಪ್ ಮೆಹ್ತಾ ಮತ್ತು ನ್ಯಾಯಾಧೀಶ ದೇವೇಂದ್ರ ಕಛಚವ್ಹಾ ಬಾಲಕಿ ಲಾವಣ್ಯಗೆ ಯಾರ ಬಳಿ ಇರಲು ಇಷ್ಟಪಡುತ್ತಿಯಾ ಎಂದು ಪ್ರಶ್ನೆ ಮಾಡಿದ್ದರು. ಲಾವಣ್ಯ ದೂರದಲ್ಲಿ ನಿಂತಿದ್ದ ಚಿಕ್ಕಮ್ಮ ಸುಮಿತ್ರಾ ಕಡೆ ಕೈ ಮಾಡಿ ತೋರಿಸಿ ಸುಮ್ಮನಾಗಿದ್ದಳು. ಬಾಲಕಿ ಕೈ ಸನ್ನೆಯೇ ಆಕೆಯ ನಿರ್ಧಾರ ಎಂದು ಭಾವಿಸಿದ ನ್ಯಾಯಾಧೀಶರು ಚಿಕ್ಕಮ್ಮಳ ವಶಕ್ಕೆ ನೀಡಿದರು. ಲಾವಣ್ಯಳನ್ನ ಕಾನೂನು ಪ್ರಕಾರ ದತ್ತು ಪಡೆದುಕೊಳ್ಳುವಾಗ ಸುಮಿತ್ರಾ ಭಾವುಕರಾಗಿ ಕಣ್ಣೀರು ಹಾಕಿದರು.
ಲಾವಣ್ಯ ತಾಯಿಯ ತಂದೆ ಮೋಹನ್ ಸಿಂಗ್ ಬಾಲಕಿಯ ಜೀವಕ್ಕೆ ಅಪಾಯವಿದೆ. ಹಾಗಾಗಿ ಮೊಮ್ಮಗಳನ್ನು ಆಕೆಯ ಚಿಕ್ಕಮ್ಮಳಾದ ಸುಮಿತ್ರಾ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ಇತ್ತ ಲಾವಣ್ಯ ತಂದೆಯ ಪೋಷಕರು ತಮ್ಮ ಬಳಿಯೇ ಮೊಮ್ಮಗಳು ಇರಬೇಕೆಂದು ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು.
ಜನವರಿ 27, 2020ರಂದು ಲಾವಣ್ಯ ತಾಯಿ ಸುನಿತಾ ಕೊಲೆಯಾಗಿತ್ತು. ತಂದೆ ಪರ್ವಿಂದ್ರ ಸಿಂಗ್ ಅಮ್ಮನ ಕೊಲೆ ಮಾಡಿದ್ದು ಎಂದು ಲಾವಣ್ಯ ಪೊಲೀಸರು ಮುಂದೆ ಹೇಳಿಕೆ ನೀಡಿದ್ದಳು. ಲಾವಣ್ಯ ಸುನಿತಾ ಕೊಲೆ ಪ್ರಕರಣದ ಪ್ರತ್ಯಕ್ಷ ಸಾಕ್ಷಿ. ಹಾಗಾಗಿ ಆಕೆ ಜೀವಕ್ಕೆ ಅಪಾಯವಿದೆ ಎಂದು ಮೋಹನ್ ಸಿಂಗ್ ಆರೋಪಿಸಿದ್ದರು. ಸುನಿತಾ ಕೊಲೆ ಬಳಿಕ ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಲಾವಣ್ಯಳನ್ನು ತಂದೆಯ ಪೋಷಕರ ವಶಕ್ಕೆ ನೀಡಿದ್ದರು. ಹೀಗಾಗಿ ಮೋಹನ್ ಸಿಂಗ್ ನ್ಯಾಯಾಲಯದ ಮೊರೆ ಹೋಗಿದ್ದರು.