ಚೆನ್ನೈ ನೋಡಲು ತ್ರಿಪುರಾದಿಂದ ವಿಮಾನದಲ್ಲಿ ಹಾರಿದ ಅಪ್ರಾಪ್ತ ಪ್ರೇಮಿಗಳು

Public TV
1 Min Read

– 14 ವರ್ಷದ ಬಾಲಕಿಗೆ ವಿಮಾನದಲ್ಲಿ ಹಾರುವ ಆಸೆ
– ಪ್ರಿಯತಮೆ ಆಸೆ ಈಡೇರಿಸಿದ 17 ವರ್ಷದ ಬಾಲಕ

ಚೆನ್ನೈ: 17 ವರ್ಷದ ಬಾಲಕ ಹಾಗೂ 14 ವರ್ಷದ ಬಾಲಕಿ ಹಲವು ದಿನಗಳಿಂದ ಪ್ರೀತಿಸುತ್ತಿದ್ದು, ಚೆನ್ನೈ ಸಿಟಿ ನೋಡುವ ಉದ್ದೇಶದಿಂದ ಯಾರಿಗೂ ತಿಳಿಯದಂತೆ ತ್ರಿಪುರಾದಿಂದ ವಿಮಾನದ ಮೂಲಕ ಆಗಮಿಸಿದ್ದಾರೆ. ಆದರೆ ತಕ್ಷಣವೇ ಅವರನ್ನು ಪೋಷಕರ ಬಳಿಗೆ ಸೇರಿಸಲಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ಅನುಮಾನಗೊಂಡು ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ) ಗೆ ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಸಿಡಬ್ಲ್ಯೂಸಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದು, ಸೋಮವಾರ ಮಧ್ಯಾಹ್ನ ಇವರಿಬ್ಬರೂ ಚೆನ್ನೈಗೆ ಬಂದಿಳಿದಿದ್ದಾರೆ. ಸ್ನೇಹಿತನೊಬ್ಬ ಇವರನ್ನು ಕರೆದೊಯ್ಯಬೇಕಿತ್ತು. ಆದರೆ ಆತ ಬಂದಿರಲಿಲ್ಲ. ಹೀಗಾಗಿ ವಿಮಾನ ನಿಲ್ದಾಣದಲ್ಲೇ ರಾತ್ರಿ ಕಳೆದಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಇವರು ಅಲೆದಾಡುವುದನ್ನು ಪೊಲೀಸರು ಗಮನಿಸಿದ್ದಾರೆ. ತಕ್ಷಣವೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ನಾವಿಬ್ಬರೂ ಪ್ರೇಮಿಗಳು
ಆರಂಭದಲ್ಲಿ ಇಬ್ಬರೂ ಅಗರ್ತಲಾದಿಂದ ಕೋಲ್ಕತ್ತಾಗೆ ಫ್ಲೈಟ್ ಮೂಲಕ ಬಂದಿದ್ದಾರೆ. ಬಳಿಕ ಚೆನ್ನೈಗೆ ಆಗಮಿಸಿದ್ದಾರೆ, ಇಲ್ಲಿ ಬಾಲಕನ ಸ್ನೇಹಿತನಿದ್ದ. ಆರಂಭದಲ್ಲಿ ಇವರಿಬ್ಬರೂ ಸುಳ್ಳು ಹೇಳಿದ್ದಾರೆ. ಬಳಿಕ ಪ್ರೀತಿಸುತ್ತಿರುವುದಾಗಿ ಹಾಗೂ ನಗರವನ್ನು ನೋಡಲು ಚೆನ್ನೈಗೆ ಬಂದಿರುವುದಾಗಿ ತಿಳಿಸಿದ್ದಾರೆ. ಬಾಲಕಿ ಕೂಡ ವಿಮಾನದಲ್ಲಿ ಹೋಗಲು ಬಯಸಿದ್ದರಿಂದ ವಿಮಾನದ ಮೂಲಕ ಚೆನ್ನೈಗೆ ಬಂದಿದ್ದಾರೆ.

ಮೊಬೈಲ್ ಫೋನ್‍ಗಳಿಂದ ಮಕ್ಕಳ ಪೋಷಕರ ಆಧಾರ್ ಕಾರ್ಡ್ ವಿವರ ಪಡೆದೆವು. ನಂತರ ಅವರ ಪೋಷಕರನ್ನು ಸಂಪರ್ಕಿಸಿದೆವು. ಆಗ ಅವರು ತ್ರಿಪುರಾದಲ್ಲಿರುವ ತಮ್ಮ ಸಂಬಂಧಿಕರಿಗೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತ್ರಿಪುರಾ ಸಿಡಬ್ಲ್ಯೂಸಿ ಅಧಿಕಾರಿಗಳು ಸಹ ಈ ಕುರಿತು ಪರಿಶೀಲನೆ ನಡೆಸಿದ್ದು, ಈ ಇಬ್ಬರು ಮನೆಯಿಂದ ಕಾಣೆಯಾಗಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಇದರ ಆಧಾರದ ಮೇಲೆ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಿ, ಬಾಲಕಿಯ ಸಂಬಂಧಿಕರ ನೆರವಿನಿಂದ ಚೆನ್ನೈನಿಂದ ತ್ರಿಪುರಾಗೆ ಕರೆ ತರುವ ವ್ಯವಸ್ಥೆ ಮಾಡಲಾಗಿದೆ. ಅವರು ಹಿಂದಿರುಗಿದ ನಂತರ ಮಕ್ಕಳು ಹಾಗೂ ಅವರ ಕುಟುಂಬಸ್ಥರೊಂದಿದೆ ಚರ್ಚೆ ನಡೆಸಿ ಸಲಹೆ ನೀಡುತ್ತೇವೆ. ಅವರ ಶಿಕ್ಷಣದತ್ತ ಗಮನಹರಿಸುವಂತೆ ತಿಳಿಸುತ್ತೇವೆ ಎಂದು ತ್ರಿಪುರಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *