ಚುನಾವಣೆಯಲ್ಲಿ ಸೋತಿದ್ದರಿಂದ ವಿಶ್ವನಾಥ್‍ಗೆ ಟಿಕೆಟ್ ಕೈತಪ್ಪಿರಬಹುದು: ಬೈರತಿ ಬಸವರಾಜ್

Public TV
1 Min Read

ಕಲಬುರಗಿ: ಹೆಚ್. ವಿಶ್ವನಾಥ್ ಅವರು ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈ ಕಾರಣಕ್ಕಾಗಿ ಅವರಿಗೆ ಪರಿಷತ್ ಟಿಕೆಟ್ ಕೈತಪ್ಪಿರಬಹುದು. ಆದರೆ ಪಕ್ಷದಲ್ಲಿ ಸೂಕ್ತಸ್ಥಾನಮಾನ ನೀಡುವುದಾಗಿ ಸಿಎಂ ಬಿಎಸ್‍ವೈ ಭರವಸೆ ನೀಡಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್ ವಿಶ್ವನಾಥ್ ಅವರಿಗೆ ಪರಿಷತ್ ಟಿಕೆಟ್ ಕೈತಪ್ಪಿದ ವಿಚಾರ ಸಂಬಂಧ ಪ್ರತಿಕ್ರಿಯಿಸಿದರು. ಚುನಾವಣೆಗೆ ಬೇಡ, ನಿಮಗೆ ಪರಿಷತ್‍ಗೆ ನಾಮಕರಣ ಮಾಡುತ್ತೇವೆ ಅಂತ ಸಿಎಂ ಹೇಳಿದ್ದರು. ಆದರೆ ಚುನಾವಣೆಯಲ್ಲಿ ವಿಶ್ವನಾಥ್ ಸೋಲು ಕಂಡಿದ್ದರು. ಹೀಗಾಗಿ ಟಿಕೆಟ್ ಕೈ ತಪ್ಪಿರಬಹುದು ಎಂದು ತಿಳಿಸಿದರು.

ಕಲಬುರಗಿಯಲ್ಲಿ ಇಂದು ನಗರವನ್ನ ಪ್ರದಕ್ಷಿಣೆ ಮಾಡಿ ಸಮಸ್ಯೆಗಳನ್ನ, ಅಭಿವೃದ್ಧಿ ಕಾಮಗಾರಿಗಳನ್ನ ವೀಕ್ಷಿಸಿದ್ದೇನೆ. ಕಲಬುರಗಿ ನಗರಕ್ಕೆ 24*7 ನೀರು ಸರಬರಾಜು ಯೋಜನೆಗೆ ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆ ಮಾಡಲಾಗುವುದು. 874 ಕೋಟಿ ರೂಪಾಯಿ ವೆಚ್ಚದಲ್ಲಿ 24*7 ಶುದ್ದ ಕುಡಿಯುವ ನೀರಿನ ಯೋಜನೆ ಕಲ್ಪಿಸಲಾಗುವುದು. ನೀರು ಶುದ್ದಿಕರಣ ಘಟಕದಲ್ಲಿನ ಹಳೆ ಯಂತ್ರೋಪಕರಣಗಳನ್ನ ತೆಗೆದು, ಅತ್ಯಾಧುನಿಕ ಯಂತ್ರೋಪಕರಣಗಳ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದರು.

ಮಹಾನಗರ ಪಾಲಿಕೆ ಆಯುಕ್ತರು ಸಹ ಅತ್ಯಂತ ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. 10 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ಅಪ್ಪಾ ಕೆರೆ ಅಭಿವೃದ್ಧಿಪಡಿಸಲು ನಿರ್ಧಾರ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ಉದ್ಯಾನವನಗಳನ್ನ ‘ಕೂಡಾ’ (KUDA) ಸಹಯೋಗದೊಂದಿಗೆ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತೆರಿಗೆ ಕಟ್ಟಲು ಜನರಿಗೆ ತೊಂದರೆಯಾದರೆ, ತೆರಿಗೆ ಪಾವತಿ ಮಾಡುವ ಅವಧಿ ವಿಸ್ತರಿಸಲಾಗುವುದು. ಆದರೆ ಯಾವುದೇ ಕಾರಣಕ್ಕೂ ತೆರಿಗೆ ಮನ್ನಾ ಮಾಡುವುದಿಲ್ಲ. ಜನರ ತೆರಿಗೆ ಹಣವನ್ನ ಸರ್ಕಾರ ಸ್ವಂತಕ್ಕೆ ಬಳಸಿಕೊಳ್ಳುವುದಿಲ್ಲ, ಆಯಾ ಜಿಲ್ಲೆಗಳ ಅಭಿವೃದ್ಧಿಗೆ ಉಪಯೋಗಿಸಲಾಗುತ್ತೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಜಾರಿ ವಿಚಾರದ ಬಗ್ಗೆ ಮಾತನಾಡಿ, ಲಾಕ್‍ಡೌನ್ ಜಾರಿ ಮಾಡೋದು ಸಿಎಂಗೆ ಬಿಟ್ಟ ವಿಚಾರ. ಕೇಂದ್ರದ ಜೊತೆ ಚರ್ಚಿಸಿ ಸಿಎಂ ಅವರೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *