ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ಧರಣಿ

Public TV
2 Min Read

ಕೋಲ್ಕತ್ತಾ: ಪ್ರಚಾರಕ್ಕೆ ನಿರ್ಬಂಧ ಹೇರಿದ ಹಿನ್ನೆಲೆ ಟಿಎಂಸಿ ಮುಖ್ಯಸ್ಥೆ, ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ವಿರುದ್ಧ ಧರಣಿ ನಡೆಸಿದ್ದಾರೆ.

ಕೋಲ್ಕತ್ತಾದ ಗಾಂಧಿ ಪ್ರತಿಮೆ ಬಳಿಗೆ ವೀಲ್ಹ್ ಚೇರ್ ಮೇಲೆಯೇ ಬಂದ ಮಮತಾ ಬ್ಯಾನರ್ಜಿ ಕಪ್ಪು ಬಣ್ಣದ ಮಾಸ್ಕ್ ಮತ್ತು ಶಾಲ್ ಧರಿಸುವ ಮೂಲಕ ಚುನಾವಣಾ ಆಯೋಗದ ಆದೇಶವನ್ನು ವಿರೋಧಿಸಿದ್ದಾರೆ. ಧರಣಿ ವೇಳೆ ಪೇಟಿಂಗ್ ಮಾಡಿದ ದೀದಿ ನಂತ್ರ ಎಲ್ಲರಿಗೂ ತೋರಿಸಿದರು.

ಈ ಹಿಂದೆ ಅಲ್ಪಸಂಖ್ಯಾತರ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಚುನಾವಣಾ ಆಯೋಗ ಕಾರಣ ಕೇಳಿ 2 ನೋಟಿಸ್ ಜಾರಿ ಮಾಡಿತ್ತು. ಇದಾದ ಬಳಿಕವೂ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ವಿರುದ್ಧ ಹೇಳಿಕೆ ನೀಡಿದ್ದರು. ನಿರಂತರವಾಗಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 8 ಗಂಟೆಯಿಂದ ಮಂಗಳವಾರ ರಾತ್ರಿ 8 ಗಂಟೆಯವರೆಗೆ ಪ್ರಚಾರಕ್ಕೆ ನಿರ್ಬಂಧ ಹೇರಿ ಆದೇಶ ಪ್ರಕಟಿಸಿತ್ತು.

ನಿರ್ಬಂಧ ಯಾಕೆ?
ಕೂಚ್‍ಬಿಹಾರ್ ಜಿಲ್ಲೆಯ ಸಿತಾಲ್‍ಕುಚಿಯಲ್ಲಿನ ಮತದಾನದ ವೇಳೆ ನಡೆದ ಹಿಂಸಾಚಾರದಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಐವರು ಬಲಿಯಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಣತಿಯಂತೆ ಈ ಹಿಂಸಾಚಾರ ನಡೆದಿದ್ದು, ಭದ್ರತಾ ಪಡೆಗಳು ಅಮಿತ್ ಶಾ ನಿರ್ದೇಶನದಂತೆ ಕೆಲಸ ಮಾಡುತ್ತಿದೆ. ಅಮಿತ್ ಶಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ಮಮತಾ ಆಗ್ರಹಿಸಿದ್ದರು.

ಘಟನೆ ದಿನವೇ ಚುನಾವಣಾ ಆಯೋಗ ಪೊಲೀಸ್ ಹಾಗೂ ಚುನಾವಣಾ ಅಧಿಕಾರಿಗಳಿಂದ ವರದಿ ತರಿಸಿಕೊಂಡಿತ್ತು. ದುಷ್ಕರ್ಮಿಗಳು ಭದ್ರತಾ ಪಡೆಗಳಿಂದ ಶಸ್ತಾಸ್ತ್ರ ಕಸಿಯಲು ಬಂದಾಗ ಅನಿವಾರ್ಯವಾಗಿ ಪ್ರಾಣ ರಕ್ಷಣೆಗಾಗಿ ಗುಂಡಿನ ದಾಳಿ ನಡೆಸಲಾಗಿದೆ. ಇದರ ಹಿಂದೆ ಯಾವುದೇ ಪಿತೂರಿ ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಸಿಆರ್ಪಿಎಫ್ ನಿರ್ದೇಶಕ ಕುಲದ್ದೀಪ್ ಸಿಂಗ್ ಪ್ರತಿಕ್ರಿಯಿಸಿ, ಚುನಾವಣಾ ಆಯೋಗದ ನಿರ್ದೇಶನದಂತೆ ಸಿಆರ್ಪಿಎಫ್ ಕೆಲಸ ಮಾಡುತ್ತದೆ. ರಾಜಕೀಯ ಪಕ್ಷಗಳ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ ಎಂದು ತಿಳಿಸಿದ್ದರು.

ಕೂಚ್‍ಬಿಹಾರ್ ಸ್ಥಳಕ್ಕೆ ಯಾವುಬ್ಬ ರಾಜಕೀಯ ವ್ಯಕ್ತಿ ತೆರಳದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ಎಂಸಿಸಿ ಮೋಡಿ ಕೋಡ್ ಆಫ್ ಕಂಡಕ್ಟ್ ಎಂದು ಬದಲಾಗಬೇಕು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿಂದೆ ಮುಸ್ಲಿಮ್ ಮತದಾರರು ವಿವಿಧ ರಾಜಕೀಯ ಪಕ್ಷಗಳಿಗೆ ಮತವನ್ನು ಹಾಕಿ ವಿಭಜನೆ ಮಾಡದೇ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕಬೇಕು ಎಂದು ಮನವಿ ಮಾಡಿದ್ದರು. ಚುನಾವಣಾ ಸಮಯದಲ್ಲಿ ಕೋಮು ನೆಲೆಯಲ್ಲಿ ಮತ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದಾದ ಬಳಿಕ ಆಯೋಗ ಮಮತಾಗೆ ನೋಟಿಸ್ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *