ಚೀನಾ ಮೇಲಿನ ನಿರ್ಬಂಧಕ್ಕೆ ಮೊದಲ ಹೆಜ್ಜೆ ಇಟ್ಟ ಅಮೆರಿಕ

Public TV
2 Min Read

ವಾಷಿಂಗ್ಟನ್: ತನ್ನ ವಿರೋಧಿ ರಾಷ್ಟ್ರಗಳ ವಿರುದ್ಧ ನಿರ್ಬಂಧ ಹೇರುತ್ತಿರುವ ಅಮೆರಿಕ ಈಗ ಚೀನಾದ ಮೇಲೂ ನಿರ್ಬಂಧ ಹೇರಲು ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಿದೆ.

ಹೌದು, ಕೊರೊನಾ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾಗುವ ಮಾಹಿತಿಯನ್ನು ಪೂರ್ಣವಾಗಿ ನೀಡಲು ವಿಫಲವಾದರೆ ಚೀನಾದ ಮೇಲೆ ನಿರ್ಬಂಧ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪೂರ್ಣ ಅಧಿಕಾರ ನೀಡುವ ಶಾಸನವನ್ನು ಅಮೆರಿಕದ ರಿಪಬ್ಲಿಕ್ ಸೆನೆಟರ್ ಗಳು ಮಂಡಿಸಿದ್ದಾರೆ.

ಮಂಗಳವಾರ ಅಮೆರಿಕದ ಮೇಲ್ಮನೆಯಲ್ಲಿ ‘ಕೋವಿಡ್ 19 ಉತ್ತರದಾಯಿತ್ವ ಮಸೂದೆ’ ಮಂಡನೆಯಾಗಿದೆ. ಸೆನೆಟರ್ ಲಿಂಡ್ಸೆ ಗ್ರಹಾಂ ಈ ಮಸೂದೆಯನ್ನು ಮಂಡಿಸಿದ್ದಾರೆ.

ಮಸೂದೆಯಲ್ಲಿ ಏನಿದೆ?
ಅಮೆರಿಕ, ಅಮೆರಿಕದ ಮಿತ್ರ ರಾಷ್ಟ್ರಗಳು, ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು, ವಿಶ್ವ ಆರೋಗ್ಯ ಸಂಸ್ಥೆಗಳ ತನಿಖೆಗೆ ಚೀನಾ ಸಂಪೂರ್ಣ ಸಹಕಾರ ನೀಡಬೇಕು ಮತ್ತು ಅಲ್ಲಿನ ಎಲ್ಲ ವೆಟ್ ಮಾರುಕಟ್ಟೆಯನ್ನು ಮುಚ್ಚಬೇಕು ಎಂಬ ಅಂಶ ಇದರಲ್ಲಿದೆ. ಅಷ್ಟೇ ಅಲ್ಲದೇ ಅಮೆರಿಕದ ಅಧ್ಯಕ್ಷರಿಗೆ ಈ ಮಾಹಿತಿಯನ್ನು ಪ್ರಮಾಣೀಕರಿಸಲು 60 ದಿನಗಳ ಕಾಲವಕಾಶವನ್ನು ನೀಡಲಾಗಿದೆ.

ಮಾಹಿತಿ ನೀಡಲು ಚೀನಾ ವಿಫಲವಾದರೆ ಆಸ್ತಿ ಮುಟ್ಟುಗೋಲು, ಪ್ರಯಾಣ ನಿಷೇಧ, ವೀಸಾ ಹಿಂತೆಗೆದುಕೊಳ್ಳುವಿಕೆ, ಅಮೆರಿಕದ ಹಣಕಾಸು ಸಂಸ್ಥೆಗಳು ಚೀನಾದ ಉದ್ಯಮಕ್ಕೆ ನೀಡುತ್ತಿರುವ ಸಾಲಕ್ಕೆ ನಿರ್ಬಂಧ, ಅಮೆರಿಕದ ಶೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಚೀನಾ ಕಂಪನಿಗಳ ಮೇಲೆ ಯಾವುದೇ ಪ್ರಮಾಣಪತ್ರ ಇಲ್ಲದೇ ನಿರ್ಬಂಧ ವಿಧಿಸಲು ಅಮೆರಿಕದ ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರ ನೀಡುವ ಅಂಶ ಈ ಮಸೂದೆಯಲ್ಲಿದೆ.

ಸೆನೆಟರ್ ಲಿಂಡ್ಸೆ ಗ್ರಹಾಂ ಪ್ರತಿಕ್ರಿಯಿಸಿ, ವುಹಾನ್ ಪ್ರಯೋಗಾಲಯದಲ್ಲಿ ಏನು ನಡೆಯುತ್ತಿದೆ ಎಂಬ ತನಿಖೆಗೆ ಅನುಮತಿ ಸಿಕ್ಕಿಲ್ಲ. ಆರಂಭದಲ್ಲಿ ಎಲ್ಲಿ ವೈರಸ್ ಸೃಷ್ಟಿ ಆಗಿತ್ತೋ ಆ ಸ್ಥಳಕ್ಕೆ ತೆರಳಿ ಅಧ್ಯಯನ ನಡೆಸಲು ಪ್ರವೇಶ ನೀಡುತ್ತಿಲ್ಲ. ಈ ವಿಚಾರ ಸಂಬಂಧ ನಾನು ಸಾಕಷ್ಟು ಬಾರಿ ಚೀನಾದ ಜೊತೆ ಮಾತನಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಚೀನಾ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ಕೋವಿಡ್ 19ಗೆ ಚೀನಾವೇ ಉತ್ತರ ನೀಡಬೇಕು ಮತ್ತು ತನಿಖೆಗೆ ಸಹಕಾರ ನೀಡಬೇಕು. ಆಧುನಿಕ ಇತಿಹಾಸದಲ್ಲಿ ಚೀನಾ ಅತಿ ದೊಡ್ಡ ಸುಳ್ಳು ಹೇಳಿ ತನ್ನ ಗಡಿಯಿಂದ ಕೋವಿಡ್ 19 ವಿಶ್ವಕ್ಕೆ ಹರಡುವಂತೆ ಮಾಡಿದೆ. ಇದು ಸ್ಥಳೀಯ ಸಮಸ್ಯೆಯಾಗಿದ್ದರೂ ಜಾಗತಿಕ ಸಾಂಕ್ರಾಮಿಕ ರೋಗವಾಗಿ ಪರಿವರ್ತನೆಯಾಗಿದೆ. ಚೀನಾ ಉದ್ದೇಶಪೂರ್ವಕವಾಗಿ ಸಮಸ್ಯೆಯನ್ನು ಸೃಷ್ಟಿಸಿ ಜಾಗತಿಕ ಮಟ್ಟದಲ್ಲಿ ಲಾಭ ಪಡೆಯಲು ಮುಂದಾಗುತ್ತಿದೆ ಎಂದು ಸೆನೆಟರ್ ಹೈಡ್ ಸ್ಮಿತ್ ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *