ನವದೆಹಲಿ: ಭಾರತ ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸುದ್ದಿಸಂಸ್ಥೆವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕೊರೊನಾದಿಂದ ಶೀಘ್ರ ಹೊರ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಚೀನಾದ ಕೊರೊನಾ ವೈರಸ್ ಮತ್ತು ಲಡಾಕ್‍ನಲ್ಲಿ ಚೀನಾ ಗಡಿ ಸಮಸ್ಯೆ ಸೃಷ್ಟಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಈ ಸಮಸ್ಯೆಗಳನ್ನು ಎದುರಿಸಲಿದ್ದು, ಚೀನಾ ಮತ್ತು ಚೀನಾದ ವೈರಸ್ ವಿರುದ್ಧದ ಯುದ್ಧದಲ್ಲಿ ನಾವು ಗೆಲ್ಲಲಿದ್ದೇವೆ ಎಂದರು.
ಐದು ದಶಕದಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಸೇನೆ ಗಡಿಯಲ್ಲಿ ಮುಖಾಮುಖಿಯಾಗಿದೆ. ಇದನ್ನು ನಾವು ಸಮರ್ಥವಾಗಿ ನಿಭಾಯಿಸುತ್ತೇವೆ. ಈಗಾಗಲೇ ಭದ್ರತೆಯನ್ನು ಹೆಚ್ಚು ಮಾಡುವ ಕೆಲಸ ಮಾಡಲಾಗಿದೆ ಎಂದು ಅಮಿತ್ ಶಾ ಹೇಳಿದರು.
ಸಂದರ್ಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅಮಿತ್ ವಾಗ್ದಾಳಿ ನಡೆಸಿದ್ದು, ಸುರೇಂದ್ರ ಮೋದಿ ಟ್ವೀಟ್ ಉಲ್ಲೇಖಿಸಿ ಮಾತನಾಡಿದ ಅವರು, ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ವಿರೋಧಿ ಪ್ರಚಾರದಲ್ಲಿ ಪಾಲ್ಗೊಳ್ಳುವ ಮೂಲಕ ಪಾಕಿಸ್ತಾನ, ಚೀನಾ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ನಾವು ಭಾರತ ವಿರೋಧಿ ಪ್ರಚಾರವನ್ನು ನಿಭಾಯಿಸುತ್ತೇವೆ. ಆದರೆ ಬಿಕ್ಕಟ್ಟಿನ ವೇಳೆ ಕೀಳು ರಾಜಕೀಯ ಮಾಡಿದ್ದು ಬೇಸರವಾಗಿದೆ. ಈ ರೀತಿಯ ಟ್ವೀಟ್ ಗಳು ಚೀನಾ ಮತ್ತು ಪಾಕಿಸ್ತಾನ ಪ್ರೋತ್ಸಾಹಿಸುತ್ತಿದ್ದು, ಅವರ ಪಕ್ಷ ಈ ಬಗ್ಗೆ ಯೋಚನೆ ಮಾಡಬೇಕು ರಾಹುಲ್ ಗಾಂಧಿ ಅವರಿಗೆ ಬುದ್ಧಿ ಹೇಳಬೇಕು ಎಂದು ಚಾಟಿ ಬೀಸಿದರು.
ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದೆಹಲಿಯಲ್ಲಿ ಜುಲೈ ಅಂತ್ಯಕ್ಕೆ 5.5 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವುದಿಲ್ಲ. ಸೋಂಕು ನಿಯಂತ್ರಕ್ಕೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಕೊರೊನಾ ವಿರುದ್ಧ ಹೋರಾಟದಲ್ಲೂ ಗೆಲ್ಲುತ್ತೇವೆ. ದೆಹಲಿಯಲ್ಲಿ ಸೋಂಕು ಸಮುದಾಯಕ್ಕೆ ಹಬ್ಬಿಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲ ರಾಜ್ಯಗಳ ಸಿಎಂಗಳ ಜೊತೆಗೆ ಸಭೆ ನಡೆಸಲಾಗಿದೆ. ನಿರಂತರ ಸಂಪರ್ಕದಲ್ಲಿದ್ದೇವೆ. ವಲಸೆ ಕಾರ್ಮಿಕರ ವಿಚಾರಕ್ಕೆ ಸಂಬಂಧಿಸಿದಂತೆ ಈ ವರೆಗೆ 2.5 ಲಕ್ಷ ಮಂದಿಗೆ ಸಹಾಯ ಮಾಡಿದ್ದೇವೆ. ರಾಷ್ಟ್ರೀಯ ವಿಪತ್ತು ನಿಧಿಯಿಂದ 11,000 ಕೋಟಿ ರೂ. ಖರ್ಚು ಮಾಡಲಾಗಿದೆ. 4594 ಶ್ರಮಿಕ್ ರೈಲುಗಳ ಮೂಲಕ 63 ಲಕ್ಷ ವಲಸೆ ಕಾರ್ಮಿಕರು ಸಂಚರಿಸಿದ್ದಾರೆ. ಆಸ್ಪತ್ರೆಗಳಲ್ಲಿ ಸೌಲಭ್ಯ ಹೆಚ್ಚಿಸುವ ಕಾರ್ಯ ನಡೆದಿದೆ ಎಂದರು.