ಚೀನಾದ ಪ್ರಾಯೋಜಕತ್ವ ಕೈಬಿಟ್ರೆ ಬಿಸಿಸಿಐಗೆ ಎಷ್ಟು ಕೋಟಿ ಲಾಸ್- ಇಲ್ಲಿದೆ ಲೆಕ್ಕ

Public TV
2 Min Read

ಮುಂಬೈ: ಲಡಾಖ್‍ನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಜನ ಸೈನಿಕರು ಹುತಾತ್ಮರಾದ ಹಿನ್ನೆಲೆ ಚೀನಾ ವಸ್ತು, ಸೇವೆ ಕೈಬಿಡುವಂತೆ ಒತ್ತಾಯ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಕೂಡ ಮಹತ್ವದ ಹೆಜ್ಜೆ ಇಟ್ಟಿದೆ.

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ ಪ್ರಾಯೋಜಕತ್ವವನ್ನು ಪರಿಶೀಲಿಸಲು ನಿರ್ಧರಿಸಿದೆ. ಇಂಡೋ-ಚೀನಾ ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್‍ನ ಆಡಳಿತ ಮಂಡಳಿ ಮುಂದಿನ ವಾರ ಸಭೆ ಕರೆದು ಲೀಗ್‍ನ ಪ್ರಾಯೋಜಕತ್ವದ ಒಪ್ಪಂದವನ್ನು ಪರಿಶೀಲಿಸಲಿದೆ. ಈ ವೇಳೆ ಚೀನಾದ ಕಂಪನಿ ವಿವೊ ಜೊತೆಗಿನ ಒಪ್ಪಂದದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಐಪಿಎಲ್‍ನ ಶೀರ್ಷಿಕೆ ಪ್ರಾಯೋಜಕರು ವಿವೋ ವಹಿಸಿದ್ದು, ಅದು ಪ್ರತಿವರ್ಷ 440 ಕೋಟಿ ರೂ.ನಂತೆ ಮಂಡಳಿಗೆ ನೀಡಿ ಐದು ವರ್ಷಗಳ ಕಾಲ ಒಪ್ಪಂದವು ಮಾಡಿಕೊಂಡಿದೆ. ಆದರೆ ಒಪ್ಪಂದವು 2022ರಲ್ಲಿ ಕೊನೆಗೊಳ್ಳುತ್ತದೆ.

ವಿವೊ ಜೊತೆಗೆ, ಮೊಬೈಲ್ ಪಾವತಿ ಸೇವೆ ಪೇಟಿಎಂ ಸಹ ಐಪಿಎಲ್ ಪ್ರಾಯೋಜಕತ್ವದ ಒಪ್ಪಂದದ ಭಾಗವಾಗಿದೆ. ಚೀನಾದ ಕಂಪನಿ ಅಲಿಬಾಬಾ ಕೂಡ ಈ ಕಂಪನಿಯಲ್ಲಿ ಹೂಡಿಕೆ ಮಾಡಿದೆ. ಪೇಟಿಎಂನಲ್ಲಿ ಅಲಿಬಾಬಾ ಶೇ.37.15ರಷ್ಟು ಪಾಲನ್ನು ಹೊಂದಿದೆ. ಇದಲ್ಲದೆ ಚೀನಾದ ವಿಡಿಯೋ ಗೇಮ್ ಕಂಪನಿ ಟೆನ್ಸೆಂಟ್ ಸ್ವಿಗ್ಗಿ ಮತ್ತು ಡ್ರೀಮ್-11ನಲ್ಲಿ ಶೇ.5.27 ರಷ್ಟು ಪಾಲನ್ನು ಹೊಂದಿದೆ. ಈ ಎಲ್ಲಾ ಚೀನೀ ಕಂಪನಿಗಳು ಬಿಸಿಸಿಐ ಪ್ರಾಯೋಜಕತ್ವ ಹೊಂದಿವೆ.

ಟೀಂ ಇಂಡಿಯಾದ ಜರ್ಸಿ ಪ್ರಯೋಜಕತ್ವವನ್ನು ಬೈಜೂಸ್ (Byju’s) ಕಂಪನಿ ಪಡೆದುಕೊಂಡಿದೆ. ಬೈಜೂಸ್ ಕಂಪನಿಯಲ್ಲಿ ಚೀನಾ ಟೆನ್ಸೆಂಟ್ ಕಂಪನಿ ಹೂಡಿಕೆ ಮಾಡಿದೆ. ಕಳೆದ ವರ್ಷ ಬಿಸಿಸಿಐ ಜೊತೆ ಐದು ವರ್ಷಗಳ ಒಪ್ಪಂದಕ್ಕೆ ಬೈಜೂಸ್ ಸಹಿ ಹಾಕಿದೆ. ಈ ಮೂಲಕ ಬಿಸಿಸಿಐಗೆ 1,079 ಕೋಟಿ ರೂ. ನೀಡುತ್ತದೆ ಎಂದು ವರದಿಯಾಗಿದೆ. ಆದರೆ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ವಿವೊದೊಂದಿಗಿನ ಒಪ್ಪಂದವನ್ನು 2022ರವರೆಗೆ ಮುಂದುವರಿಸಬೇಕೆ ಅಥವಾ ರದ್ದುಗೊಳಿಸಬೇಕೆ ಎಂದು ನಿರ್ಧರಿಸಲಾಗುತ್ತದೆ.

ಚೀನಾದ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಬ್ರಾಂಡ್ ಪ್ರಚಾರದ ಹೆಸರಿನಲ್ಲಿ ಮಾರಾಟ ಮಾಡುವ ಮೂಲಕ ಗಳಿಸುವ ಬಹುಪಾಲು ಹಣವನ್ನು ಬಿಸಿಸಿಐ ಪಡೆಯುತ್ತದೆ. ಆ ಗಳಿಕೆಯ ಮೇಲೆ ಬಿಸಿಸಿಐ ಕೇಂದ್ರ ಸರ್ಕಾರಕ್ಕೆ ಶೇ.42ರಷ್ಟು ತೆರಿಗೆಯನ್ನು ಪಾವತಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಒಪ್ಪಂದವು ಚೀನಾಕ್ಕೆ ಅಲ್ಲ ಆದರೆ ಭಾರತದ ಹಿತಕ್ಕಾಗಿ ಅಗತ್ಯವಿದೆ ಎಂಬ ಮಾತುಗಳು ಕೇಳಿ ಬಂದಿವೆ.

Share This Article
Leave a Comment

Leave a Reply

Your email address will not be published. Required fields are marked *