ಚಿರತೆ ದಾಳಿಗೆ ಬಾಲಕ ಬಲಿ- ಶವವಿಟ್ಟು ಪ್ರತಿಭಟನೆ

Public TV
1 Min Read

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪೂರ ಗಡ್ಡೆ ಪಕ್ಕದಲ್ಲಿ ಚಿರತೆ ದಾಳಿಯಿಂದ ಬಾಲಕ ಮೃತಪಟ್ಟಿದ್ದು, ಸ್ಥಳೀಯರು ಸೇರಿದಂತೆ ಸಣಾಪೂರ, ಜಗ್ಲಿ, ರಾಂಪೂರ ಗ್ರಾಮದ ನೂರಾರು ನಿವಾಸಿಗಳು ಅಂತ್ಯಸಂಸ್ಕಾರ ಮಾಡದೆ ಶವ ಇಟ್ಟು, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಆನೆಗೊಂದಿ ವ್ಯಾಪ್ತಿಯ ಸಂಗಾಪೂರ, ಆನೆಗೊಂದಿ, ರಾಂಪೂರ, ಜಂಗ್ಲಿ ಸೇರಿದಂತೆ ನಾನಾ ಪ್ರದೇಶಗಳಲ್ಲಿ ನರಭಕ್ಷಕ ಚಿರತೆ ಹಾವಳಿ ಹೆಚ್ಚಳವಾಗಿದೆ. ಮೂರು ತಿಂಗಳಲ್ಲಿ ಇಬ್ಬರು ಯುವಕರನ್ನು ಚಿರತೆ ಬಲಿ ಪಡೆದಿದೆ. ಹಾಗೇ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿರತೆ ದಾಳಿಯ ಕುರಿತು ಅಧಿಕಾರಿಗಳಿಗೆ ಕೇಳಿದರೆ ಅಕಾರಿಗಳು ಕೇವಲ ಹಾರಿಕೆ ಉತ್ತರಗಳನ್ನು ನೀಡಿ ಜಾರಿಕೊಳ್ಳುತ್ತಿದ್ದಾರೆ.

ಚಿರತೆ ದಾಳಿಯಿಂದ ಗ್ರಾಮಸ್ಥರು ಜೀವ ಕೈಯ್ಯಲ್ಲಿ ಹಿಡಿದುಕೊಂಡೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಮೀನುಗಳಿಗೆ ಹೋಗಲು ಭಯದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ಕೂಡಲೇ ಸ್ಥಳಕ್ಕೆ ಆಗಮಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು. ಅಲ್ಲಿಯವರೆಗೂ ಮೃತ ಬಾಲಕನ ಶವ ಅಂತ್ಯ ಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಆನಂದ್ ಸಿಂಗ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ವಾಹನಗಳ ಸಂಚಾರಕ್ಕೆ ಅವಕಾಶ ನೀಡದೆ ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದ್ದು, ಸಂಜೆ ಸಚಿವರು ಬರುವವರೆಗೂ ಪಟ್ಟು ಬಿಡದೆ ಪ್ರತಿಭಟಿಸಿದರು. ನಂತರ ಸಚಿವ ಆನಂದ್ ಸಿಂಗ್ ಹಾಗೂ ಶಾಸಕ ಪರಣ್ಣ ಮುನವಳ್ಳಿ ಸ್ಥಳಕ್ಕೆ ಭೇಟಿ ನೀಡಿ, ಮೃತ ಬಾಲಕನ ಕುಟುಂಬದವರಿಗೆ ಸಾಂತ್ವನ ಹೇಳಿ, ನರಭಕ್ಷಕ ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಸಹ ಸಾರ್ವಜನಿಕರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ, ಘೋಷಣೆಗಳನ್ನು ಕೂಗಿದರು.

ಬೆಳಗ್ಗೆಯಿಂದ ನೂರಾರು ಜನ ಸೇರಿ ರಸ್ತೆ ಬಂದ್ ಮಾಡಿ, ಪ್ರತಿಭಟನೆ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಸ್ಥಳೀಯ ಅಧಿಕಾರಿಗಳು ಜನರ ಮನವೊಲಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಸೀಲ್ದಾರ, ಎಸ್‍ಪಿ, ಡಿವೈಎಸ್‍ಪಿ, ಸಿಪಿಐ, ಪಿಎಸ್‍ಐ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲಿಯೇ ಬಿಡು ಬಿಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *