ಚಿನ್ನದ ಪದಕಕ್ಕೆ ಕನ್ನ – ಟ್ರೋಲ್ ಆಯ್ತು ಚೀನಾ

Public TV
1 Min Read

ಬೀಜಿಂಗ್: ಟೋಕಿಯೋ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನ ಪಡೆದಿದ್ದರೂ ಚೀನಾದಲ್ಲಿ ಮಾತ್ರ ಮೊದಲ ಸ್ಥಾನ ಪಡೆದಿದೆ.

ಚೀನಾ ಸೆಂಟ್ರಲ್ ಟೆಲಿವಿಶನ್(ಸಿಸಿಟಿವಿ) ಟೋಕಿಯೋ ಒಲಿಂಪಿಕ್ಸ್ ಪದಕ ಪಟ್ಟಿಯನ್ನು ತಿರುಚಿ ಸುದ್ದಿಯನ್ನು ಪ್ರಕಟಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.

ಒಲಿಂಪಿಕ್ಸ್ ನಲ್ಲಿ ಅಮೆರಿಕ 39 ಚಿನ್ನ, 41 ಬೆಳ್ಳಿ, 33 ಕಂಚಿನ ಪದಕದೊಂದಿಗೆ ಒಟ್ಟು 113 ಪದಕ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದೆ. ಚೀನಾ 38 ಚಿನ್ನ, 32 ಬೆಳ್ಳಿ, 18 ಕಂಚಿನ ಪದಕ ಸೇರಿ ಒಟ್ಟು 88 ಪದಕ ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ. ಆದರೆ ಸಿಸಿಟಿವಿ 42 ಚಿನ್ನ, 37 ಬೆಳ್ಳಿ, 27 ಕಂಚಿನ ಪದಕ ಸೇರಿ ಒಟ್ಟು 16 ಪದಕ ಪಡೆಯುವ ಮೂಲಕ ಚೀನಾ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿ ವರದಿ ಪ್ರಕಟಿಸಿದೆ.

ಹಾಂಕಾಂಗ್ ಮತ್ತು ಚೈನೀಸ್ ತೈಪೆ(ತೈವಾನ್) ಚೀನಾದ ಭಾಗವಾಗಿರುವ ಈ ದೇಶಗಳು ಪಡೆದಿರುವ ಪದಕಗಳನ್ನು ಸಿಸಿಟಿವಿ ಚೀನಾಗೆ ಸೇರಿಸಿದೆ. ಹೀಗಾಗಿ ಪದಕ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನ ಪಡೆದಿದೆ ಎಂದು ಬಿಂಬಿಸಿ ವರದಿ ಮಾಡಿದೆ.

ಒಲಿಂಪಿಕ್ಸ್ ನಲ್ಲಿ ಹಾಂಕಾಂಗ್ 1 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕ ಪಡೆಯುವ ಮೂಲಕ 49ನೇ ಸ್ಥಾನ ಪಡೆದರೆ, 2 ಚಿನ್ನ, 4 ಬೆಳ್ಳಿ, 6 ಚಿನ್ನ ಪಡೆಯುವ ಮೂಲಕ ಚೈನೀಸ್ ತೈಪೆ ಪಟ್ಟಿಯಲ್ಲಿ 34ನೇ ಸ್ಥಾನ ಪಡೆದಿದೆ. ಇದನ್ನೂ ಓದಿ: ಕ್ರೀಡೆಯಲ್ಲಿ ಅಲ್ಲ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ‘ಚಿನ್ನ’ 

ಸಿಸಿಟಿವಿ ಈ ತಿರುಚಿನ ವರದಿ ಪ್ರಕಟಗೊಂಡ ಬೆನ್ನಲ್ಲೇ ಭಾರೀ ಟ್ರೋಲ್ ಆಗುತ್ತಿದೆ. ಕೊರೊನಾ ವಿಚಾರದಲ್ಲೂ ವಿಶ್ವಕ್ಕೆ ಸುಳ್ಳು ಹೇಳಿದ ಚೀನಾ ಈಗ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲೂ ಸುಳ್ಳು ಹೇಳಿ ಚೀನಾ ಜನರನ್ನು ವಂಚಿಸುತ್ತಿದೆ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *