ಚಿಕ್ಕಮಗಳೂರಲ್ಲಿ ದತ್ತಜಯಂತಿ ಸಂಭ್ರಮ- ಕೇಸರಿ ನಾಡಾದ ಕಾಫಿನಾಡು

Public TV
1 Min Read

ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ಜಿಲ್ಲೆಯ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ದತ್ತ ಜಯಂತಿಯ ಸಂಭ್ರಮ ಮೇಳೈಸಿರುವುದರಿಂದ ಸಂಘ ಪರಿವಾರದ ಕಾರ್ಯಕರ್ತರು ಇಡೀ ನಗರವನ್ನ ಕೇಸರಿಮಯವಾಗಿಸಿದ್ದಾರೆ.

ಒಟ್ಟು 11 ದಿನದ ಕಾರ್ಯಕ್ರಮಕ್ಕೆ ಈಗಾಗಲೇ ಅಧಿಕೃತ ಚಾಲನೆ ಸಿಕ್ಕಿದೆ. ಡಿಸೆಂಬರ್ 19ರಂದೇ ಮಾಲೆ ಧರಿಸಿರೋ ದತ್ತ ಭಕ್ತರು ವೃತದಲ್ಲಿದ್ದಾರೆ. ಡಿಸೆಂಬರ್ 27 ಅನುಸೂಯ ಜಯಂತಿ, 28 ಸಾಂಕೇತಿಕ ಶೋಭಾ ಯಾತ್ರೆ ಹಾಗೂ 29 ರಂದು ದತ್ತಪೀಠದಲ್ಲಿ ದತ್ತ ಜಯಂತಿ ಹಾಗೂ ದತ್ತ ಪಾದುಕೆ ದರ್ಶನ ನಡೆಯಲಿದೆ.

ದತ್ತಾತ್ರೇಯನ ಭಕ್ತರು ಇಡೀ ಚಿಕ್ಕಮಗಳೂರು ನಗರವನ್ನ ಕೇಸರಿಮಯವಾಗಿಸಿದ್ದಾರೆ. ಮಧ್ಯರಾತ್ರಿವರೆಗೂ ನಗರದ ಪ್ರಮುಖ ಬೀದಿಗಳಲ್ಲಿ ಕೇಸರಿ ಬ್ಯಾನರ್, ಬಂಟಿಗ್ಸ್ ಕಟ್ಟಿದ್ದಾರೆ. ನಗರದ ಹನುಮಂತಪ್ಪ ವೃತ್ತ, ಎನ್‍ಎಂಸಿ ವೃತ್ತ, ಬೋಳರಾಮೇಶ್ವರ ಸರ್ಕಲ್, ಟೌನ್ ಕ್ಯಾಂಟೀನ್ ಸರ್ಕಲ್, ಎಐಟಿ ವೃತ್ತ ಸೇರಿದಂತ ನಗರದ ಪ್ರಮುಖ ಬೀದಿಗಳನ್ನ ಕಲರ್ ಫುಲ್ ಮಾಡಿದ್ದಾರೆ.

ಡಿ.27ರಂದು ಅನುಸೂಯ ಪೂಜೆ ಅಂಗವಾಗಿ ಬೆಳಗ್ಗೆ 9.30ಕ್ಕೆ ಮಹಿಳೆಯರಿಂದ ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಕಾಮಧೇನು ಗಣಪತಿ ದೇವಸ್ಥಾನದವರೆಗೆ ಸಂಕೀರ್ತನಾ ಯಾತ್ರೆ ನಡೆಯಲಿದೆ. ಈ ಸಂಕೀರ್ತನಾ ಯಾತ್ರೆಯಲ್ಲಿ ಜಿಲ್ಲೆಯ ಪ್ರಸಿದ್ಧ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾಹಿತಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸೆಲಬ್ರಿಟಿಗಳು ಭಾಗವಹಿಸಲಿದ್ದಾರೆ.

ಡಿ.28ರಂದು ಮಧ್ಯಾಹ್ನ 2ಗಂಟೆಗೆ ನಗರದ ರತ್ನಗಿರಿ ರಸ್ತೆಯಲ್ಲಿರುವ ಕಾಮಧೇನು ಗಣಪತಿ ದೇವಸ್ಥಾನದಿಂದ ಸಂಕೀರ್ತನಾ ಯಾತ್ರೆ ಆರಂಭಗೊಂಡು ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಆಜಾದ್‍ಪಾರ್ಕ್ ವೃತ್ತದಲ್ಲಿ ಮಹಾ ಆರತಿಯ ಕಾರ್ಯಕ್ರಮ ಮೂಲಕ ಕೊನೆಗೊಳ್ಳಲಿದೆ. ಡಿ.29ರಂದು ದತ್ತ ಭಕ್ತರು ಹಾಗೂ ಮಾಲಾಧಾರಿಗಳು ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿ ಕಾಲ್ನಡಿಗೆಯಲ್ಲಿ ಭಜನೆಯೊಂದಿಗೆ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಬಳಿಕ ದತ್ತ ಪೀಠದಲ್ಲಿ ಗಣಪತಿ ಹೋಮ, ದತ್ತಹೋಮ, ಧನ್ವಂತರಿ ಹೋಮ ಕಾರ್ಯಕ್ರಮ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *