ಚಿಕ್ಕಬಳ್ಳಾಪುರ ಜಿಲ್ಲೆಗೆ ಆಂಧ್ರಪ್ರದೇಶದಿಂದ ನೀರು ತರಲು ಪ್ರಯತ್ನ: ಸುಧಾಕರ್

Public TV
1 Min Read

ಚಿಕ್ಕಬಳ್ಳಾಪುರ: ಜಿಲ್ಲೆಯ ಗಡಿಭಾಗದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಆಂಧ್ರಪ್ರದೇಶದಿಂದ ನೀರು ಪಡೆಯುವ ಕುರಿತು ಚರ್ಚೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದರು.

ಜಿಲ್ಲೆಯ ಗೌರಿಬಿದನೂರಿನಲ್ಲಿ ನಗರಸಭೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 7.29 ಕೋಟಿ ರೂಪಾಯಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವ, ಚಿಕ್ಕಬಳ್ಳಾಪುರ ತಾಲೂಕಿನ ನೀರಿನ ಸಮಸ್ಯೆ ಪರಿಹರಿಸಲು ಎಚ್‍ಎನ್ ವ್ಯಾಲಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗುತ್ತಿದೆ. ಗೌರಿಬಿದನೂರಿಗೂ ಈ ನೀರು ಸಿಗಲಿದೆ. ಎತ್ತಿನಹೊಳೆ ಯೋಜನೆಯಿಂದಲೂ ಈ ಭಾಗಗಳಿಗೆ ನೀರು ನೀಡುವ ಪ್ರಯತ್ನ ನಡೆದಿದೆ ಎಂದರು.

ಜೊತೆಗೆ ಅದಷ್ಟು ಬೇಗ ನೀರು ತರಲು ನೆರೆಯ ರಾಜ್ಯ ಆಂಧ್ರಪ್ರದೇಶದಿಂದ 5 ರಿಂದ 10 ಟಿಎಂಸಿ ನೀರು ಪಡೆಯುವ ಬಗ್ಗೆ ಚರ್ಚೆಯಾಗಿದೆ. ಜಲಸಂಪನ್ಮೂಲ ಸಚಿವರ ಜೊತೆ ಈ ಬಗ್ಗೆ ಚರ್ಚಿಸಲಾಗಿದೆ. ಆಂಧ್ರದಿಂದ ಇಲ್ಲಿನ ಗಡಿಭಾಗಗಳಿಗೆ ನೀರು ಪಡೆದು, ಬೇರೆ ಮೂಲಗಳಿಂದ ಅಷ್ಟೇ ನೀರನ್ನು ಆಂಧ್ರಕ್ಕೆ ನೀಡುವ ಕುರಿತು ಚರ್ಚೆಯಾಗಿದೆ. ಶೀಘ್ರದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಗುವುದು. ನೆರೆಯ ರಾಜ್ಯ ಆಂಧ್ರದ ಗಡಿಭಾಗಕ್ಕೆ ಅಲ್ಲಿನ ಸರ್ಕಾರ ನೀರು ಹರಿಸುತ್ತಿದ್ದು, ಅದೇ ಕಾಲುವೆ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಪಡೆಯುವ ಉದ್ದೇಶ ಹೊಂದಲಾಗಿದೆ.

ಇದೇ ವೇಳೆ ಗೌರಿಬಿದನೂರಿನಲ್ಲಿ ಕೈಗಾರಿಕೆ ಅಭಿವೃದ್ಧಿಯಾಗುತ್ತಿದೆ. ಇದಕ್ಕೆ ಪೂರಕವಾದಂತೆ ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಜಾರಿ ಮಾಡಿದೆ. ಚಿಕ್ಕಬಳ್ಳಾಪುರವನ್ನು ಕೂಡ ಹಂತ 2 ವರ್ಗದಲ್ಲಿ ಸೇರ್ಪಡೆಗೊಳಿಸಿದರೆ ಕೈಗಾರಿಕೆ ಅಭಿವೃದ್ಧಿ ಸುಲಭವಾಗಲಿದೆ. ಜೊತೆಗೆ ಉದ್ಯಮಿಗಳಿಗೆ ಹಲವು ಬಗೆಯ ರಿಯಾಯಿತಿ ದೊರೆಯಲಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತಲಾ 5 ಸಾವಿರ ರೂ. ವೈದ್ಯಕೀಯ ಸಹಾಯಧನ ವಿತರಿಸಲಾಯಿತು. ಆಶ್ರಯ ಯೋಜನೆಯಡಿಯ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಯಿತು. ಇದೇ ಕಾರ್ಯಕ್ರಮದಲ್ಲಿ ಶಾಸಕ ಶಿವಶಂಕರರೆಡ್ಡಿ ಹಾಜರಿದರು.

Share This Article
Leave a Comment

Leave a Reply

Your email address will not be published. Required fields are marked *