ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದ 55 ಖೈದಿಗಳಿಗೆ ಕೊರೊನಾ

Public TV
1 Min Read

– ಕೋವಿಡ್‍ಗೆ ಇಬ್ಬರು ಪೊಲೀಸರು ಬಲಿ
– ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಸಿಬ್ಬಂದಿಗೆ ಪಾಸಿಟಿವ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿ 55ಕ್ಕೂ ಹೆಚ್ಚು ಖೈದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇತ್ತ ಇಬ್ಬರು ಪೊಲೀಸರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ವಾರದ ಹಿಂದೆ 7 ಖೈದಿಗಳಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿದ್ದವು. ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಏಳು ಖೈದಿಗಳ ವರದಿ ಪಾಸಿಟಿವ್ ಬಂದಿತ್ತು. ತದನಂತರ ಎಚ್ಚೆತ್ತು ಕಾರಾಗೃಹದಲ್ಲಿನ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿಸಿದಾಗ 55 ಕ್ಕೂ ಹೆಚ್ಚು ಮಂದಿಗೆ ಈಗ ಕೊರೊನಾ ಸೋಂಕು ತಗುಲಿದೆ. ಸದ್ಯ ಕೊರೊನಾ ಸೋಂಕಿತರನ್ನ ಚಿಕ್ಕಬಳ್ಳಾಪುರ ನಗರ ಹೊರವಲಯದ ಕಂದವಾರ ಗ್ರಾಮದ ಎಎನ್‍ಎಂ ತರಬೇತಿ ಕೇಂದ್ರದ ಸಿಸಿ ಸೆಂಟರ್ ನಲ್ಲಿರಿಸಿ ನಿಗಾ ವಹಿಸಲಾಗಿದೆ. ಕಂದವಾರ ಸಿಸಿಯಲ್ಲಿ ಖೈದಿಗಳೇ ಇರುವ ಕಾರಣ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಇಬ್ಬರ ಸಾವು, 25ಕ್ಕೂ ಹೆಚ್ಚು ಸಿಬ್ಬಂದಿಗೆ ಪಾಸಿಟಿವ್:
ಬಾಗೇಪಲ್ಲಿ ಪೊಲೀಸ್ ಠಾಣೆಯ ಮುಖ್ಯಪೇದೆ ಶ್ರೀನಿವಾಸ್ ಹಾಗೂ ಮಂಚೇನಹಳ್ಳಿ ಪೊಲೀಸ್ ಠಾಣೆಯ ಮುಖ್ಯಪೇದೆ ಲೋಕೇಶ್ ಕೊರೊನಾಗೆ ಬಲಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ 25ಕ್ಕೂ ಹೆಚ್ಚು ಪೊಲೀಸರು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ಬಹುತೇಕರು ಹೊಂ ಐಸೋಲೇಷನ್ ನಲ್ಲಿದ್ದು, ಇಬ್ಬರನ್ನೂ ಮಾತ್ರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೊನಾ ಪಾಸಿಟಿವ್ ಆದ ಪೊಲೀಸರು ಹಾಗೂ ಅವರ ಸಂಬಂಧಿಕರಿಗೂ ಸಹ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರ ಯೋಗ ಕ್ಷೇಮ ತುರ್ತು ಅಗತ್ಯ ವಸ್ತುಗಳ ವಿತರಣೆಗೆ ಅಂತ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಆದರೆ ದುರದೃಷ್ಟವಶಾತ್ ಇಲಾಖೆಯ ಇಬ್ಬರು ಸಿಬ್ಬಂದಿಯನ್ನ ಕಳೆದುಕೊಂಡಿರೋದು ನೋವು ತಂದಿದೆ ಅಂತ ಎಸ್‍ಪಿ ಮಿಥುನ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

ಇಡೀ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಇನ್ನೂ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಸ್ಟಿಮಿಂಗ್ ತೆಗೆದುಕೊಳ್ಳಲು ಜಿಲ್ಲಾ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದೆ. ಕರ್ತವ್ಯಕ್ಕೆ ಹಾಜರಾಗುವ ಮುನ್ನ ಹಾಗೂ ಕರ್ತವ್ಯದಿಂದ ನಿರ್ಗಮನದ ವೇಳೆ ಸ್ಟಿಮಿಂಗ್ ತಗೆದುಕೊಳ್ಳುವಂತೆ ಸೂಚಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *