ಚಾಮರಾಜನಗರದಲ್ಲಿ ಕೊರೊನಾಗೆ 4ನೇ ಬಲಿ- ಗುಂಡ್ಲುಪೇಟೆಯಲ್ಲಿ 100ಕ್ಕೇರಿದ ಸೋಂಕು

Public TV
1 Min Read

ಚಾಮರಾಜನಗರ: ಕೊರೊನಾ ಮಹಾಮಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಕೋವಿಡ್-19 ನಿಂದ ಜಿಲ್ಲೆಯಲ್ಲಿ ನಾಲ್ಕು ದಿನಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಗುಂಡ್ಲುಪೇಟೆಯ ಎಪಿಎಂಸಿ ಮಾಜಿ ನಿರ್ದೇಶಕರೂ ಆಗಿದ್ದ ಮರದ ವ್ಯಾಪಾರಿಯೊಬ್ಬರಿಗೆ ಕಳೆದ ನಾಲ್ಕು ದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 65 ವರ್ಷದ ಈ ವ್ಯಕ್ತಿಯನ್ನು ಚಾಮರಾಜನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಐಸಿಯು ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ಪತ್ನಿ, ಮಗ, ಮಗಳು, ಅಳಿಯನಿಗೂ ಕೊರೊನಾ ದೃಢಪಟ್ಟಿದ್ದು ಅವರನ್ನು ಸಹ ಚಾಮರಾಜನಗರ ಜಿಲ್ಲೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜುಲೈ 11ರಂದು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ತಾಲೂಕಿನ ಕಾಮಗೆರೆಯ 58 ವರ್ಷದ ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಜುಲೈ 12ರಂದು ಕೊಳ್ಳೇಗಾಲದವರೇ ಆದ 65 ವರ್ಷದ ನಿವೃತ್ತ ನರ್ಸಿಂಗ್ ಸೂಪರಿಂಟೆಂಡೆಂಟ್ ಒಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಜುಲೈ 13ರಂದು ಪಾಳ್ಯ ಗ್ರಾಮದ 60 ವರ್ಷದ ವ್ಯಕ್ತಿ ಕೋವಿಡ್-19ಗೆ ಬಲಿಯಾಗಿದ್ದರು. ಇದೀಗ ಗುಂಡ್ಲುಪೇಟೆಯ 65 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದು ದಿನಕ್ಕೊಬ್ಬರಂತೆ ಸತತ ನಾಲ್ಕು ದಿನಗಳಿಂದ ಸರಣಿ ಸಾವು ಸಂಭವಿಸಿರುವುದು ಆತಂಕ ಮೂಡಿಸಿದೆ.

ಈವರೆಗೆ ಚಾಮರಾಜನಗರ ಜಿಲ್ಲೆಯಲ್ಲಿ 187 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಗುಂಡ್ಲುಪೇಟೆ ತಾಲೂಕೊಂದರಲ್ಲೇ ಸೋಂಕಿತರ ಸಂಖ್ಯೆ ಶತಕ ದಾಟಿದೆ. ಗುಂಡ್ಲುಪೇಟೆ ಪಟ್ಟಣ ಹಾಗೂ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 103ಕ್ಕೆ ಏರಿದೆ. ಜೂನ್ 19ರಂದು ಗುಂಡ್ಲುಪೇಟೆ ಮಹದೇವಪ್ರಸಾದ್ ನಗರದ ಟೆಂಪೋ ಚಾಲಕನೊಬ್ಬನಿಗೆ ಕೊರೊನಾ ದೃಢಪಟ್ಟಿತ್ತು. ತಮಿಳುನಾಡಿಗೆ ಸರಕು ಸಾಗಾಣೆ ಮಾಡುತ್ತಿದ್ದ ಈ ಟೆಂಪೋ ಚಾಲಕನ ಸಂಪರ್ಕದಿಂದ ಮಹದೇವಪ್ರಸಾದ್ ನಗರದ ಹಲವಾರು ಮಂದಿಗೆ ಸೋಂಕು ತಗುಲಿತ್ತು.

ಇಷ್ಟೇ ಅಲ್ಲದೆ ಅಂತರ ಜಿಲ್ಲಾ ಹಾಗೂ ಅಂತರ ರಾಜ್ಯ ಪ್ರಯಾಣದಿಂದ ಗುಂಡ್ಲುಪೇಟೆ ತಾಲೂಕಿನ ಗ್ರಾಮಾಂತರ ಪ್ರದೇಶಕ್ಕೂ ಕೊರೊನಾ ಕಾಲಿಟ್ಟಿದೆ. ತಾಲೂಕಿನ ಚಿಕ್ಕತುಪ್ಪೂರು, ದೊಡ್ಡತುಪ್ಪೂರು, ದೇಪಾಪುರ, ಕಬ್ಬಹಳ್ಳಿ ಮಡಹಳ್ಳಿ, ಬೊಮ್ಮಲಾಪುರ, ಕುನಗಹಳ್ಳಿ, ಬೆಳವಾಡಿ, ಬಂಡಿಪುರ ಹೀಗೆ ಹಳ್ಳಿ ಹಳ್ಳಿಗೂ ಕೊರೊನಾ ಕಾಲಿರಿಸುವ ಮೂಲಕ ಸಮುದಾಯಕ್ಕೂ ಹಬ್ಬಿರುವ ಆತಂಕ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *