ಚನ್ನರಾಯಪಟ್ಟಣ ಪಿಎಸ್‍ಐ ಆತ್ಮಹತ್ಯೆ- ಉನ್ನತ ಮಟ್ಟದ ತನಿಖೆಗೆ ಎಚ್‍ಡಿಕೆ ಆಗ್ರಹ

Public TV
2 Min Read

– ರಾಜ್ಯ ಸರ್ಕಾರ ಮೌನದ ವಿರುದ್ಧ ಎಚ್‍ಡಿಕೆ ಕಿಡಿ
– ‘ಹಿರಿಯ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ’

ಬೆಂಗಳೂರು: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪಿಎಸ್‍ಐ ಕಿರಣ್‍ಕುಮಾರ್ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಬಿಜೆಪಿ ಸರ್ಕಾರ ಉನ್ನತಮಟ್ಟದ ತನಿಖೆಗೆ ತಕ್ಷಣ ಆದೇಶಿಸಬೇಕೆಂದು ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ  ಆಗ್ರಹಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಎಚ್‍ಡಿಕೆ, ಪೊಲೀಸರು ಮತ್ತು ಹಿರಿಯ ಪೊಲೀಸ್ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಟ ಮಾಡುವ ಪರಿಸ್ಥಿತಿಯಲ್ಲಿ ಅವರ ಆತ್ಮಾಭಿಮಾನ, ಸ್ವಾಭಿಮಾನಕ್ಕೆ ಧಕ್ಕೆ ತರುವಂತೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದೆ ಪಿಎಸ್‍ಐ ಆತ್ಮಹತ್ಯೆಗೆ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಸೂಕ್ತ ತನಿಖೆಗೆ ಆದೇಶಿಸುವ ಮೂಲಕ ಕಿರಿಯ ಹಂತದ ಪೊಲೀಸ್ ಅಧಿಕಾರಿಗಳಲ್ಲಿ ನೈತಿಕ, ಸ್ಥೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು. ಹಿಂದೆ ಗಣಪತಿ ಭಟ್, ಮಲ್ಲಿಕಾರ್ಜುನ ಬಂಡೆ, ಕಲ್ಲಪ್ಪ ಹಂಡಿಬಾಗ್ ಅವರ ಅಕಾಲಿಕ ಸಾವು ಮತ್ತು ಅನುಪಮಾ ಶೆಣೈ ಅವರ ರಾಜೀನಾಮೆ ವೇಳೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯದಾದ್ಯಂತ ‘ಜಾಗಟೆ’ ಬಾರಿಸಿದ್ದ ಬಿಜೆಪಿ ಈಗ ಮೌನಕ್ಕೆ ಶರಣಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಕಿರಣ್ ಕುಮಾರ್ ಅವರ ಮೊಬೈಲ್ ಫೋನನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಜಪ್ತಿ ಮಾಡಿದ್ದು ಹಲವು ಶಂಕೆಗಳಿಗೆ ಎಡೆಮಾಡಿಕೊಟ್ಟಿದೆ. ಇವರ ಸಾವಿಗೆ ಆಯಕಟ್ಟಿನ ಜಾಗದಲ್ಲಿ ಕುಳಿತ ಹಿರಿಯ ಪೊಲೀಸ್ ಅಧಿಕಾರಿಗಳ ದೌರ್ಜನ್ಯ ಹಾಗೂ ಬೆದರಿಕೆ ತಂತ್ರ ಕಾರಣ ಎಂಬ ಮಾಹಿತಿ ನನಗಿದೆ. ಬೇರೆ ಪಕ್ಷಗಳ ಆಡಳಿತಾವಧಿಯಲ್ಲಿ ಅಧಿಕಾರಿಗಳ ನಿಗೂಢ ಸಾವಿಗೆ ಸರ್ಕಾರವೇ ಕಾರಣ ಎಂದು ಬೊಬ್ಬೆ ಹಾಕಿದ್ದ ಬಿಜೆಪಿ ವರ್ಷದಿಂದ ಆಡಳಿತ ಚುಕ್ಕಾಣಿ ಹಿಡಿದಿದೆ. ಈಗ ಪಿಎಸ್‍ಐ, ಇದಕ್ಕೂ ಮುನ್ನ ಐಎಎಸ್ ಅಧಿಕಾರಿ, ಕಳೆದ ವರ್ಷ ಐಎಫ್‍ಎಸ್ ಅಧಿಕಾರಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸರ್ಕಾರ ದಿವ್ಯ ಮೌನಕ್ಕೆ ಶರಣಾಗಿರುವುದು ಸರಿಯಲ್ಲ ಎಂದಿದ್ದಾರೆ.

ಈ ಹಿಂದೆ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾದಾಗ ನ್ಯಾಯಸಮ್ಮತ ತನಿಖೆಗೆ ಒತ್ತಡ ಹೇರುತ್ತಿದ್ದ ಬಿಜೆಪಿ ಈ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ತಕ್ಷಣ ಆದೇಶ ನೀಡಬೇಕು. ಯಾವುದೇ ಇಲಾಖೆಯಲ್ಲಿಯೂ ಪ್ರಾಮಾಣಿಕ ಅಧಿಕಾರಿಗಳು ಕಿರುಕುಳಕ್ಕೆ ಒಳಗಾಗದಂತೆ ಎಚ್ಚರವಹಿಸಬೇಕು ಎಂದು ಹೇಳಿದ್ದಾರೆ.

ರಾಜಕೀಯ ಒತ್ತಡವಿತ್ತಾ?
ಚನ್ನರಾಯಪಟ್ಟಣದಲ್ಲಿ ಎರಡು ದಿನದಲ್ಲಿ ಎರಡು ಕೊಲೆ ನಡೆದಿತ್ತು. ಕೊಲೆ ನಡೆದ ಸ್ಥಳಕ್ಕೆ ಹೋಗಿ ಕಿರಣ್ ಕುಮಾರ್ ಪರಿಶೀಲನೆ ಮಾಡಿದ್ದರು. ಆದರೆ ಕೊಲೆಗೆ ಸಂಬಂಧಿದಂತೆ ಆರೋಪಿಗಳ ಬಂಧಿಸುವಲ್ಲಿ ರಾಜಕೀಯ ಒತ್ತಡವಿತ್ತು ಎನ್ನಲಾಗಿದೆ. ನಿನ್ನೆ ವರಮಹಾಲಕ್ಷ್ಮಿ ಹಬ್ಬ ಇದ್ದರಿಂದ ಪತ್ನಿ ತಂದೆ ಮನೆಗೆ ಹೋಗಿದ್ದ ಅವರು ಉಪಹಾರ ಸೇವಿಸಿ ತಾವು ವಾಸವಿದ್ದ ಮನೆ ವಾಪಸ್ ಆಗಿದ್ದರು. ಈ ವೇಳೆ ಮನೆಯಲ್ಲಿ ಪ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *