ಚಂದ್ರಲೋಕಕ್ಕೆ ಟ್ರಿಪ್, ಮನೆಗೊಂದು ಹೆಲಿಕಾಪ್ಟರ್ – ಪಕ್ಷೇತರ ಅಭ್ಯರ್ಥಿಯಿಂದ ಅಚ್ಚರಿಯ ಪ್ರಣಾಳಿಕೆ

Public TV
2 Min Read

– ವಿಭಿನ್ನ ಆಶ್ವಾಸನೆಗೆ ಸ್ಪಷ್ಟನೆ ನೀಡಿದ ಸರವಣನ್

ಚೆನ್ನೈ: ಸಾಮಾನ್ಯವಾಗಿ ಚುನಾವಣೆ ಬಂದಾಗ ಅಭ್ಯರ್ಥಿಗಳು ತಮ್ಮ ಪ್ರಣಾಳಿಕೆಯಲ್ಲಿ ಅಭಿವೃದ್ಧಿಯ ಬಗ್ಗೆ ಹೇಳುವುದನ್ನು ಕೇಳಿದ್ದೇವೆ. ಇತ್ತೀಚೆಗೆ ಮನೆಗೆ ವಾಷಿಂಗ್ ಮೆಷಿನ್ ಹಾಗೂ ಇನ್ನಿತರ ವಸ್ತುಗಳನ್ನು ನೀಡುವುದನ್ನು ಕೂಡ ನೋಡಿದ್ದೇವೆ. ಆದರೆ ಇದೀಗ ತಮಿಳುನಾಡಿನ ಪಕ್ಷೇತರ ಅಭ್ಯರ್ಥಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಹೌದು. ಮಧುರೈ ದಕ್ಷಿಣ ಕ್ಷೇತ್ರದಿಂದ ತುಲಮ್ ಸರವಣನ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಇದೀಗ ಇವರು ಇತರ ಅಭ್ಯರ್ಥಿಗಳಿಗಿಂದ ತುಂಬಾನೇ ವಿಭಿನ್ನವಾದ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಸದ್ಯ ಈ ಚುನಾವಣಾ ಪ್ರಣಾಳಿಕೆ ತಮಿಳುನಾಡಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ಇವರ ಚುನಾವಣಾ ಚಿಹ್ನೆ ‘ಕಸದ ಬುಟ್ಟಿ’ಯಾಗಿದೆ.

ಪ್ರಣಾಳಿಕೆಯಲ್ಲೇನಿದೆ..?
ನಾನು ಗೆದ್ದು ಬಂದರೆ ಮಿನಿ ಹೆಲಿಕಾಪ್ಟರ್, ಪ್ರತಿ ಮನೆಗೂ ವರ್ಷಕ್ಕೆ 1 ಕೋಟಿ, ಮದುವೆಗಳಿಗೆ ಚಿನ್ನಾಭರಣ, ಮೂರು ಮಹಡಿಯ ಮನೆ ನೀಡುತ್ತೇನೆ. ಅಲ್ಲದೆ ಚಂದ್ರನಲ್ಲಿಗೆ ಪ್ರವಾಸ ಹೋಗಲು ಅನುಕೂಲ ಮಾಡಿಕೊಡುತ್ತೇನೆ ಎಂದು ಹೇಳುವ ಮೂಲಕ ಮತದಾರರ ಅಂಗೈಯಲ್ಲಿ ಚಂದ್ರನನ್ನು ತೋರಿಸಿದ್ದಾರೆ.

ಇಷ್ಟು ಮಾತ್ರವಲ್ಲದೆ ಬೇಸಿಗೆಯ ಬಿಸಿಲನ್ನು ನಿಯಂತ್ರಿಸಲು ತಮ್ಮ ಕ್ಷೇತ್ರದಲ್ಲಿ 300 ಅಡಿ ಎತ್ತರದ ಕೃತಕ ಮಂಜುಗಡ್ಡೆಯನ್ನೇ ನಿರ್ಮಿಸುತ್ತೇನೆ. ಗೃಹಿಣಿಯರಿಗೆ ಮನೆಕೆಲಸದಲ್ಲಿ ಸಹಾಯ ಮಾಡಲು ರೋಬೋಟ್, ಪ್ರತಿ ಮನೆಗೆ ದೋಣಿ ನೀಡುತ್ತೇನೆ. ಮದುವೆಯಾಗದೆ ಇದ್ದ ಯುವಕರು ತಮ್ಮ ವೃದ್ಧ ಪೋಷಕರೊಂದಿಗೆ ಇದ್ದರೆ ಅಂತವರಿಗೂ ಸಹಾಯ ಮಾಡುತ್ತೇನೆ. ಹೀಗೆ ಅನೇಕ ಆಶ್ವಾಸನೆಗಳನ್ನು ನೀಡುವ ಮೂಲಕ ಮತದಾರರ ಗಮನ ಸೆಳೆಯುವಂತೆ ಮಾಡಿದ್ದಾರೆ.

ವಿಭಿನ್ನ ಆಶ್ವಾಸನೆಗೆ ಕಾರಣವೇನು..?
ರಾಜಕೀಯ ಪಕ್ಷಗಳು ವಿವಿಧ ಭರವಸೆಗಳನ್ನು ನೀಡುತ್ತಾ ಇದೂವರೆಗೆ ಗೆಲ್ಲುತ್ತಾ ಬಂದಿವೆ. ಆದರೆ ಪ್ರಣಾಳಿಕೆಯಲ್ಲಿ ನೀಡಿದ್ದ ಯಾವುದೇ ಆಶ್ವಾಸನೆಗಳನ್ನು ಅವರು ಈಡೇರಿಸಲಿಲ್ಲ. ಹೀಗಾಗಿ ಇಂತಹ ಜನ ರಾಜಕಾರಣಿಗಳ ಆಶ್ವಾಸನೆಗಳಿಗೆ ಮರುಳಾಗಬಾರದು. ಹಣದ ಹಿಂದೆ ಹೋಗಬಾರದು. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂಬುದೇ ನನ್ನ ಗುರಿಯಾಗಿದೆ. ಈ ಬಗ್ಗೆ ನಾನು ಜನರಲ್ಲಿ ಅರಿವು ಕೂಡ ಮೂಡಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ನಾನು ಇಡೀ ವಿಶ್ವದಲ್ಲಿಯೇ ಯಾರೂ ನೀಡದಂತಹ ಹಾಗೂ ಯಾರಿಂದಲೂ ಈಡೇರಿಸಲಾಗದಂತಹ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇನೆ. ಜನರನ್ನು ಜಾಗೃತಿಗೊಳಿಸುವ ಉದ್ದೇಶ ಇದಾಗಿದೆ. ಈ ಮೂಲಕ ಮತದಾರರು ಸುಲಭವಾಗಿ ಮೋಸ ಹೋಗುತ್ತಿದ್ದಾರೆ ಎಂಬುದನ್ನು ತಿಳಿಸುವ ಸಲುವಾಗಿ ಇಂತಹ ಪ್ರಣಾಳಿಕೆ ಬಿಡುಗಡೆ ಮಾಡಿರುವುದಾಗಿ 33 ವರ್ಷದ ಪತ್ರಕರ್ತ ಹಾಗೂ ಚುನಾವಣಾ ಅಭ್ಯರ್ಥಿ ಸರವಣನ್ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಪ್ರಚಾರ ಮಾಡಲು ನನ್ನ ಬಳಿ ಹಣವಿರಲಿಲ್ಲ. ಹೀಗಾಗಿ ನಾನು ಸ್ನೇಹಿತರು ಹಾಗೂ ಸಂಬಂಧಿಕರ ಸಹಾಯ ಕೋರಿದ್ದೇನೆ. ಸದ್ಯ ನನ್ನ ವಾಟ್ಸಪ್ ಮೆಸೇಜ್ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತಾನು ಈಗಾಗಲೇ ನೀಡಿರುವ ದೊಡ್ಡ ದೊಡ್ಡ ಆಶ್ವಾಸನೆಗಳನ್ನು ನೋಡಿ ಜನ ಯೋಚನೆ ಮಾಡುತ್ತಿದ್ದಾರೆ. ಅಲ್ಲದೆ ಈ ಆಸ್ವಾನೆಗಳ ಹಿಂದೆ ಏನಿದೆ ಎಂದು ಗೊಂದಕ್ಕೀಡಾಗಿದ್ದಾರೆ. ಒಂದು ವೇಳೆ ನಾನು ಸೋತರೂ ಇದೇ ನನ್ನ ಗೆಲುವು ಎಂದು ಸರವಣನ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *