ಚಂದನವನದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭಾವಂತ ನಿರ್ದೇಶಕ ಅಂಬರೀಶ್

Public TV
2 Min Read

ಬೆಂಗಳೂರು: ಸಿನಿಮಾ ನಿರ್ದೇಶಕನಾಗಬೇಕು ಎಂಬ ಕನಸ್ಸನ್ನು ಹೊತ್ತು ರೈತ ಕುಟುಂಬದಿಂದ ಗಾಂಧಿನಗರಕ್ಕೆ ಬಂದ ಪ್ರತಿಭಾವಂತ ಹುಡುಗ ಇಂದು ತನ್ನ ಕನಸಿನಂತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಪ್ರತಿಭಾವಂತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.

ಸ್ವಂತಿಕೆ, ಸ್ವಾಭಿಮಾನ, ಸತತ ಪರಿಶ್ರಮದಿಂದ ನಿರ್ದೇಶಕನಾಗಿ ಬೆಳೆಯುತ್ತಿರುವ ಈ ಹುಡುಗನ ಹೆಸರು ಅಂಬರೀಶ್. ಚಿತ್ರರಂಗದಲ್ಲಿ ಯಾರ ನೆರವೂ, ಬೆಂಬಲ ಇಲ್ಲದೆ ಕೇವಲ ಪ್ರತಿಭೆಯಿಂದ ಗುರುತಿಸಿಕೊಳ್ಳುತ್ತಿರುವ ಅಂಬರೀಶ್ ಚಿತ್ರರಂಗದಲ್ಲಿ ಹಂತ ಹಂತವಾಗಿ ಹೆಸರು ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೂ ತಾನೊಬ್ಬ ನಿರ್ದೇಶಕನಾಗಬೇಕು ದೇಸಿ ಸೊಬಗು ಒಳಗೊಂಡಿರುವ ಒಳ್ಳೆಯ ಕಥೆ, ಕಂಟೆಟ್ ಇರುವ ಸಿನಿಮಾ ನಿರ್ದೇಶನ ಮಾಡಿ ಮನರಂಜನೆ ನೀಡಬೇಕು ಎಂಬುದು ಅಂಬರೀಶ್ ಅವರ ಕನಸು. ಕಾಲೇಜು ದಿನಗಳಲ್ಲೇ ನಾಟಕಗಳಿಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದ ಅಂಬರೀಶ್, ರಂಗಭೂಮಿ ಕಲಾವಿದನಾಗಿ ರಂಗಭೂಮಿ ನಾಟಕಗಳನ್ನೂ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು.

ನಿರ್ದೇಶನದ ಜೊತೆ ರಂಗಭೂಮಿ ನಾಟಕ ಹಾಗೂ ಬೀದಿ ನಾಟಕಗಳಲ್ಲಿಯೂ ಅಭಿನಯಿಸಿರುವ ಅಂಬರೀಶ್, ವಿದ್ಯಾಭ್ಯಾಸದ ಬಳಿಕ ಜಾಹೀರಾತುಗಳಲ್ಲಿ ಸ್ಕ್ರಿಪ್ಟ್ ಹಾಗೂ ಕಂಟೆಂಟ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಧಾರಾವಾಹಿ ಹಾಗೂ ಅನೇಕ ಸಿನಿಮಾಗಳಿಗೆ ಬರಹಗಾರನಾಗಿ ಅಂಬರೀಶ್ ಅನುಭವ ಪಡೆದಿದ್ದಾರೆ. ಆ ಅನುಭವದ ಶಕ್ತಿಯಿಂದಲೇ `ಜ್ವಲಂತ’, `ಕಾಲಂತಕ’ ಹಾಗೂ `ಹೋಪ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರರಂಗದಲ್ಲಿ ಯಾರ ಸಪೋರ್ಟ್ ಇಲ್ಲದೆ ಸ್ವಂತ ಪ್ರತಿಭೆ, ಸ್ವಾಭಿಮಾನದಿಂದ ಇಂದು ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ ಅಂಬರೀಶ್.

2016ರಲ್ಲಿ ತೆರೆಕಂಡ `ಜ್ವಲಂತ’ ಸಿನಿಮಾ ಮೂಲಕ ಚಂದನವನದಲ್ಲಿ ಡೈರೆಕ್ಟರ್ ಕ್ಯಾಪ್ ತೊಟ್ಟ ಅಂಬರೀಶ್, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ `ಜ್ವಲಂತ’ ನಂತರ `ಕಾಲಂತಕ’ ಎಂಬ ಥ್ರಿಲ್ಲರ್ ಸಿನಿಮಾ ಕೂಡ ನಿರ್ದೇಶನ ಮಾಡಿದ್ದಾರೆ. ಯಶ್ ಶೆಟ್ಟಿ, ಅರ್ಚನಾ ಜೋಯಿಸ್ ಅಭಿನಯದ ಈ ಚಿತ್ರ ಬಿಡುಗಡೆಯ ಹಂತದಲ್ಲಿದೆ.

ಇದೀಗ `ಹೋಪ್’ ಎನ್ನುವ ಹೊಸ ಪ್ರಾಜೆಕ್ಟ್ ಚಿತ್ರೀಕರಣ ಕಂಪ್ಲೀಟ್ ಮಾಡಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಅಂಬರೀಶ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ಹೊಸ ಪ್ರಾಜೆಕ್ಟ್ ಒಂದನ್ನು ಕೈಗೆತ್ತಿಕೊಂಡಿದ್ದು ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳುವ ಆಲೋಚನೆಯಲ್ಲಿರುವ ಅಂಬರೀಶ್ ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿದ್ದಾರೆ. ಕನಸುಗಳನ್ನು ಕಾಣೋದಲ್ಲ ಅವುಗಳನ್ನು ನಿರಂತರ ಪರಿಶ್ರಮದಿಂದ ಸಾಕಾರಗೊಳಿಸಬೇಕು ಎನ್ನುವ ಅಂಬರೀಶ್, ಪ್ರತಿ ಕೆಲಸದಲ್ಲೂ ಸ್ವಂತಿಕೆ ಎನ್ನುವುದು ತುಂಬಾ ಮುಖ್ಯ ಅದುವೇ ನನ್ನ ಮೂಲಮಂತ್ರ ಎನ್ನುತ್ತಾರೆ.

ನಿರ್ದೇಶಕನಾಗಿ ಉತ್ತಮ ಸಿನಿಮಾಗಳನ್ನು ನಿರ್ದೇಶನ ಮಾಡಬೇಕು, ಸಿನಿಮಾಗಳ ಮೂಲಕವೇ ಗುರುತಿಸಿಕೊಳ್ಳಬೇಕು ಎಂಬುದು ಅಂಬರೀಶ್ ಅವರ ಆಸೆ. ನಿರ್ದೇಶಕನಾಗಿ ಅಂಬರೀಶ್ ಇನ್ನೂ ಹೆಚ್ಚು ಹೆಸರು ಮಾಡಲಿ, ಉತ್ತಮ ಸಿನಿಮಾಗಳನ್ನು ಚಂದನವನಕ್ಕೆ ನೀಡಲಿ ಎಂಬುದೇ ನಮ್ಮ ಆಶಯ.

Share This Article
Leave a Comment

Leave a Reply

Your email address will not be published. Required fields are marked *