ಗ್ರಾಮ ಪಂಚಾಯಿತಿ ಚುನಾವಣೆಯ ರಾಜಕೀಯ ವೈಷಮ್ಯ- ಸಿನಿಮಾ ಸ್ಟೈಲಲ್ಲಿ ಸ್ಕೆಚ್ ಹಾಕಿ ಕೊಲೆ

Public TV
2 Min Read

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೋಗೇನಹಳ್ಳಿ ಬಳಿ ಫೆಬ್ರವರಿ 6 ರಂದು ಲಕ್ಷ್ಮೀನರಸಿಂಹಪ್ಪರನ್ನ ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕೊಲೆಗೆ ರಾಜಕೀಯ ವೈಷಮ್ಯವೇ ಕಾರಣ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ತನಿಖೆ ನಡೆಸಿದ ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರವಿಶಂಕರ್ ನೇತೃತ್ವದ ತಂಡ, ಆರೋಪಿಗಳಾದ ರಾಜಾರೆಡ್ಡಿ, ಶ್ರೀರಾಮರೆಡ್ಡಿ, ನರಸಿಂಹರೆಡ್ಡಿಯನ್ನ ಬಂಧಿಸಿದ್ದು, ಮತ್ತೋರ್ವ ಆರೋಪಿ ಮಂಜುನಾಥ ನಾಪತ್ತೆಯಾಗಿದ್ದಾನೆ.

ಕೊಲೆ ಮಾಡಿದ್ದು ಹೇಗೆ?
ಕೊಲೆಯಾದ ಲಕ್ಷ್ಮೀನರಸಿಂಹಪ್ಪ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆರೋಪಿ ಶ್ರೀರಾಮರೆಡ್ಡಿ ಪತ್ನಿ ವಿರುದ್ಧ ಮತ್ತೋರ್ವ ಅಭ್ಯರ್ಥಿಯನ್ನ ಕಣಕ್ಕಿಳಿಸಿ ರಾಜಕೀಯ ಸೆಣಸಾಟ ನಡೆಸಿದ್ದ. ಆದರೂ ಚುನಾವಣೆಯಲ್ಲಿ ಶ್ರೀರಾಮರೆಡ್ಡಿ ಪತ್ನಿಯೇ ಜಯಶಾಲಿಯಾಗಿ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಆದರೆ ಚುನಾವಣಾ ಫಲಿತಾಂಶದ ನಂತರ ದ್ವೇಷದಿಂದ ಇಬ್ಬರೂ ಕಿತ್ತಾಡಿದ್ದರು. ಈ ಪ್ರಕರಣ ಗುಡಿಬಂಡೆ ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜೀ ಪಂಚಾಯಿತಿ ಮೂಲಕ ಬಗೆಹರಿದಿತ್ತು.

ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಚು ರೂಪಿಸಿದ ಶ್ರೀರಾಮರೆಡ್ಡಿ, ತನ್ನ ಸಂಬಂಧಿಗಳ ಜೊತೆ ಸೇರಿ ಲಕ್ಷ್ಮೀನರಸಿಂಹಪ್ಪ ಕೊಲೆ ಮಾಡಿದ್ದಾನೆ. ಲಕ್ಷ್ಮೀನರಸಿಂಹಪ್ಪ ವಿರುದ್ದ ಒಳಗೊಳಗೆ ದ್ವೇಷ ಕಾರುತ್ತಿದ್ದ ಶ್ರೀರಾಮರೆಡ್ಡಿ, ತನ್ನ ಸಂಬಂಧಿಗಳಾದ ಮಂಜುನಾಥ ರೆಡ್ಡಿ, ರಾಜಾರೆಡ್ಡಿ ಹಾಗೂ ನರಸಿಂಹರೆಡ್ಡಿ ಜೊತೆ ಲಕ್ಷ್ಮೀನರಸಿಂಹಪ್ಪ ಕೊಲೆಗೆ ಸಿನಿಮಾ ಶೈಲಿಯಲ್ಲಿ ಪಕ್ಕಾ ಪ್ಲಾನ್ ಮಾಡಿದ್ದಾನೆ.

ಡಾಬಾದಲ್ಲಿ ಮದ್ಯ ಸೇವಿಸುತ್ತಾ ಪ್ಲಾನ್ ಮಾಡಿದ ನಾಲ್ವರು, ಪ್ಲಾನ್ ನಂತೆ ಲಕ್ಷ್ಮೀನರಸಿಂಹಪ್ಪನಿಗೆ ರಾಜಾರೆಡ್ಡಿ ಕರೆ ಮಾಡಿ ವರದಯ್ಯಗಾರಿಪಲ್ಲಿಯಲ್ಲಿದ್ದ ಲಕ್ಷ್ಮೀನರಸಿಂಹಪ್ಪನನ್ನು ಆತನ ಬೈಕ್ ಮೂಲಕವೇ ಏನೂ ಅರಿಯದಂತೆ ಕರೆದುಕೊಂಡು ಬಂದಿದ್ದಾನೆ. ಮೊದಲೇ ಪ್ಲಾನ್ ಮಾಡಿದಂತೆ ಲಕ್ಷ್ಮೀನರಸಿಂಹಪ್ಪ ಬರೋ ದಾರಿ ಮಧ್ಯೆ ಮೋರಿ ಕೆಳಗೆ ಅವಿತು ಕೂತಿದ್ದ ಶ್ರೀರಾಮರೆಡ್ಡಿ ಹಾಗೂ ನರಸಿಂಹರೆಡ್ಡಿ, ಲಕ್ಷ್ಮೀನರಸಿಂಹಪ್ಪನ ಬೈಕ್ ಅಡ್ಡ ಹಾಕಿ ದಾಳಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವೇಳೆ ಲಕ್ಷ್ಮೀನರಸಿಂಹಪ್ಪನನ್ನು ಕರೆದುಕೊಂಡು ಬಂದ ರಾಜಾರೆಡ್ಡಿಯೇ ಆತನ ತಲೆಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಲಕ್ಷ್ಮೀ ನರಸಿಂಹಪ್ಪ ತಮ್ಮ ವಿರುದ್ಧ ಬೇರೆ ಅಭ್ಯರ್ಥಿ ಕಣಕ್ಕಿಳಿಸಿದ ಪರಿಣಾಮ ಚುನಾವಣೆಯಲ್ಲಿ ಲಕ್ಷ ಲಕ್ಷ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂತು. ಅಲ್ಲದೆ ಸದಾ ಲಕ್ಷ್ಮೀನರಸಿಂಹಪ್ಪ ನಮಗೆ ರಾಜಕೀಯ ಎದುರಾಳಿಯಾಗಿ ನಮ್ಮ ವಿರುದ್ಧ ನಿಲ್ಲುತ್ತಾನೆ ಎಂದು ಲಕ್ಷ್ಮೀನರಸಿಂಹರೆಡ್ಡಿಯನ್ನ ಕೊಂದು ಹಾಕಿದ್ದಾರೆ. ಸದ್ಯ ಮೂವರು ಆರೋಪಿಗಳನ್ನ ಬಂಧಿಸಿರುವ ಗುಡಿಬಂಡೆ ಪೊಲೀಸರು ನಾಪತ್ತೆಯಾಗಿರೋ ಮಂಜುನಾಥ್‍ಗಾಗಿ ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *