ಗ್ರಾಮದಲ್ಲೇ ಸವದತ್ತಿ ಯಲ್ಲಮ್ಮ ಜಾತ್ರೆಯನ್ನು ಆಚರಿಸಿದ ಗ್ರಾಮಸ್ಥರು

Public TV
1 Min Read

ಧಾರವಾಡ: ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊರೊನಾ ಹಾವಳಿ ಹೆಚ್ಚಾದ ಹಿನ್ನೆಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಜಾತ್ರೆ ರದ್ದು ಪಡಿಸಲಾಗಿದೆ. ಹಾಗಾಗಿ ಜಿಲ್ಲೆಯ ಗ್ರಾಮಸ್ಥರು ಗ್ರಾಮದಲ್ಲೇ ಜಾತ್ರೆ ಮಾಡಿ ಭಕ್ತಿ ಮೆರೆದಿದ್ದಾರೆ.

ಹುಣ್ಣಿಮೆಯಂದು ನಡೆಯುವ ಇಲ್ಲಿನ ಜಾತ್ರೆಗೆ ಪ್ರತಿ ವರ್ಷ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಕರ್ನಾಟಕದಲ್ಲಿ ಮುನ್ನೆಚ್ಚರಿಕೆಯಿಂದ ಜಾತ್ರೆಗೆ ಅವಕಾಶ ನೀಡಿಲ್ಲ. ಹಾಗಾಗಿ ದೇವಿಯ ಭಕ್ತರು ತಾವಿದ್ದ ಸ್ಥಳದಲ್ಲೇ ದೇವರಿಗೆ ಪೂಜೆ ಮಾಡಿ ಭಕ್ತಿಯಿಂದ ಕೈ ಮುಗಿದಿದ್ದಾರೆ. ಮನಸೂರ ಗ್ರಾಮದ ಕರೆಮ್ಮ ದೇವಿ ದೇವಸ್ಥಾನದಲ್ಲಿ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮದ ಜನರು ಎರಡು ದಿನ ಅಲ್ಲೇ ಇದ್ದು, ಅಲ್ಲಿಯೇ ಅಡುಗೆ ಮಾಡಿ ಹಡ್ಡಲಗಿ ತುಂಬಿಸಿ ಯಲ್ಲಮ್ಮ ದೇವಿಗೆ ಭಕ್ತಿ ಸಮರ್ಪಣೆ ಮಾಡಿದ್ದಾರೆ.

ಪ್ರತಿ ವರ್ಷ ಜಿಲ್ಲೆಯ ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಗ್ರಾಮದ ಜನರು ಟ್ರ್ಯಾಕ್ಟರ್ ಹಾಗೂ ಚಕ್ಕಡಿ ಮೂಲಕ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ಜಾತ್ರೆ ಮಾಡುತ್ತಿದ್ದರು. ಈ ವರ್ಷ ಮಾತ್ರ ಭಕ್ತರಿಗೆ ಯಲ್ಲಮ್ಮ ಗುಡ್ಡಕ್ಕೆ ಹೋಗಲು ಅವಕಾಶ ಸಿಗದ ಹಿನ್ನೆಲೆ ಗ್ರಾಮದ ಜನರು ಕೋವಿಡ್ ನಿಯಮ ಪಾಲಿಸಿ ಶ್ರೀಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಹೇಗೆ ಜಾತ್ರೆ ಮಾಡಲಾಗುತ್ತಿತ್ತೋ ಅದೇ ರೀತಿ ಈ ಬಾರಿ ಗ್ರಾಮದಲ್ಲೇ ಪೂಜೆ ಪುನಸ್ಕಾರ ಮಾಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *