ಗೋಹತ್ಯೆ ತಡೆ ಬಿಲ್‍ಗೆ ದಿಢೀರ್ ಅಂಗೀಕಾರ- ಉತ್ತರಪ್ರದೇಶ, ಗುಜರಾತ್ ಮಾದರಿ ದಂಡ, ಶಿಕ್ಷೆ

Public TV
2 Min Read

– ಗೋಹತ್ಯೆ ತಡೆ ಮಸೂದೆಯ ಪ್ರಮುಖ ಅಂಶಗಳು
– ನಾಳೆಯ ಕಲಾಪ ಬಹಿಷ್ಕರಿಸಿದ ಕಾಂಗ್ರೆಸ್

ಬೆಂಗಳೂರು: ನಾಳೆ ವಿಧಾನಮಂಡಲ ಅಧಿವೇಶನಕ್ಕೆ ತೆರೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಇಂದಿನ ಕಲಾಪದ ಅಜೆಂಡಾದಲ್ಲಿ ಇಲ್ಲದಿದ್ರೂ ರಾಜ್ಯ ಸರ್ಕಾರ ತರಾತುರಿಯಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಯಾವುದೇ ಚರ್ಚೆ ಇಲ್ಲದೇ ಅಂಗೀಕಾರವನ್ನು ಪಡೆದುಕೊಂಡಿದೆ.

ವಿಧಾನಸಭೆಯಲ್ಲಿ ಸಚಿವ ಪ್ರಭು ಚೌಹಾಣ್ ಮಸೂದೆ ಮಂಡಿಸಲು ಮುಂದಾಗುತ್ತಲೇ ಕಾಂಗ್ರೆಸ್ ಸದಸ್ಯರು ಆಕ್ಷೇಪ ಎತ್ತಿದ್ದರು. ಸದನದ ಬಾವಿಗಿಳಿದು ಧರಣಿ ನಡೆಸಿದರಿ. ಇದಕ್ಕೆ ಜೆಡಿಎಸ್ ಸದಸ್ಯರು ಕೂಡ ಸಾಥ್ ನೀಡಿದರು. ಈ ವೇಳೆ ಕಾಂಗ್ರೆಸ್-ಬಿಜೆಪಿ ಸದಸ್ಯರ ಮಧ್ಯೆ ವಾಕ್ಸಮರ ಜೋರಾಗಿ ನಡೀತು. ಗದ್ದಲದ ಮಧ್ಯೆ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಸ್ಪೀಕರ್ ಅವಕಾಶ ಮಾಡಿಕೊಟ್ಟರು.

ಕಾಂಗ್ರೆಸ್, ಜೆಡಿಎಸ್ ಸದಸ್ಯರು ಧಿಕ್ಕಾರ ಕೂಗಿದರು. ದನ ಕಡಿಯೋರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್‍ನವರಿಗೆ ಶೇಮ್ ಶೇಮ್ ಎಂದು ಬಿಜೆಪಿಯವರು ಕೂಗಿದ್ರು. ಇದರ ನಡ್ವೆಯೇ ಮಸೂದೆಯನ್ನು ಅಂಗೀಕರಿಸಲಾಯ್ತು. ಬಳಿಕ ಮಾತನಾಡಿದ ಸಿದ್ದರಾಮಯ್ಯ, ಸದನ ಸಂಪ್ರದಾಯಗಳನ್ನು ಬಿಜೆಪಿ ನಾಶ ಮಾಡುತ್ತಿದೆ. ಬಿಜೆಪಿಯವರು ಪ್ರಜಾಪ್ರಭುತ್ವದ ಕೊಲೆಗಡುಕರು ಎಂದು ಆಕ್ರೋಶ ಹೊರಹಾಕಿದರು. ಬಿಜೆಪಿ ಧೋರಣೆ ಖಂಡಿಸಿ ನಾಳೆ ಕಲಾಪ ಬಹಿಷ್ಕರಿಸೋದಾಗಿ ಘೋಷಿಸಿದರು.

ಪಂಚಾಯ್ತಿ ಚುನಾವಣೆ ವೇಳೆ ಈ ಬಿಲ್ ತಂದಿದ್ದು, ಜನರ ಮೇಲೆ ಪ್ರಭಾವ ಬೀರುತ್ತಿದೆ. ಚುನಾವಣಾ ಆಯೋಗಕ್ಕೆ ದೂರು ಕೊಡಲಾಗುವುದು ಎಂದು ತಿಳಿಸಿದರು. ಇನ್ನು ಇದು ಪೊಲಿಟಿಕಲ್ ಪ್ಲಾನ್, ಇನ್ಮುಂದೆ ನಾವು ಬಿಎಸಿ ಸಭೆಗೆ ಹೋಗಲ್ಲ ಎಂದು ಡಿಕೆ ಶಿವಕುಮಾರ್ ಘೋಷಿಸಿದರು. ಇನ್ನು ಸಿದ್ದರಾಮಯ್ಯ, ಡಿಕೆಶಿ ಬಳಿ ಸಚಿವ ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದ ದೃಶ್ಯಗಳು ಕಂಡು ಬಂದವು. ಇದಕ್ಕೂ ಮುನ್ನ ಹಸುಗಳಿಗೆ ವಿಧಾನಸೌಧದ ಪೂರ್ವ ಬಾಗಿಲಿನಲ್ಲಿ ಸಚಿವರು ಪೂಜೆ ಸಲ್ಲಿಸಿದರು.

ಮಸೂದೆಯ ಪ್ರಮುಖ ಅಂಶಗಳು: ಹಸು, ಕರು, ದನ, ಎಮ್ಮೆಗಳ ಹತ್ಯೆ ನಿಷೇಧ ಮಾಡುವುದು. ಹತ್ಯೆಗಾಗಿ ಗೋವುಗಳ ಸಾಗಣೆಗೆ ಸಂಪೂರ್ಣ ನಿರ್ಬಂಧ. ಗೋಹತ್ಯೆಗೆ 50 ಸಾವಿರದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು. ಗೋಹತ್ಯೆ ಅಪರಾಧದಲ್ಲಿ 2ನೇ ಬಾರಿ ಸಿಕ್ಕಿಬಿದ್ರೆ 10 ಲಕ್ಷ ರೂ ದಂಡ. ಗೋಹತ್ಯೆಗೆ 3 ರಿಂದ 7 ವರ್ಷ ಕಾಲ ಜೈಲು ಶಿಕ್ಷೆ ಮತ್ತು ಅಪರಾಧಿಗಳಿಗೆ ನಿರ್ದಿಷ್ಟ ಅವಧಿವರೆಗೆ ಜಾಮೀನು ಇಲ್ಲ.

13 ವರ್ಷ ಮೇಲ್ಪಟ್ಟ ಎಮ್ಮೆಗಳ ಹತ್ಯೆಗೆ ಷರತ್ತುಬದ್ಧ ಒಪ್ಪಿಗೆ ನೀಡಿದ್ದು, ಸಂಬಂಧಿಸಿದ ಸಂಸ್ಥೆಗಳ ಅನುಮತಿ ಅಗತ್ಯವಾಗಿ ಪಡೆದುಕೊಳ್ಳುವುದು. ಗುಜರಾತ್, ಯುಪಿ ಮಾದರಿಯಲ್ಲಿ ಶಿಕ್ಷೆ, ದಂಡ ವಿಧಿಸಲಾಗುವುದು. ಗೋಹತ್ಯೆ ಪ್ರಕರಣಗಳ ವಿಚಾರಣೆ ವಿಶೇಷ ಕೋರ್ಟ್ ನಲ್ಲಿ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *