ಗೋವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಯಡಿಯೂರಪ್ಪ

Public TV
2 Min Read

ಚಿಕ್ಕಬಳ್ಳಾಪುರ: ಗೋವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಭೂಮಿ ಕಾಡು ಗೋವುಗಳ ನಡುವೆ ಅವಿನಾಭಾವ ಸಂಬಂಧ ಇದೆ ನಾವೆಲ್ಲರು ಇದನ್ನು ಅರಿತುಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಕ್ಷೇತ್ರದ ಬಳಿಯ ರಾಷ್ಟ್ರೋತ್ಥಾನ ಗೋಶಾಲೆ ಮಾಧವ ಸೃಷ್ಟಿಗೆ ಇಂದು ಯಡಿಯೂರಪ್ಪ ಭೇಟಿ ನೀಡಿದರು. ರಾಷ್ಟ್ರೋತ್ಥಾನ ಗೋ ಶಾಲೆಯಲ್ಲಿ ಸಸಿ ನೆಡುವ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಎಸ್‍ವೈ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಗೋವಿಗೆ ಯಡಿಯೂರಪ್ಪನವರು ಪೂಜೆ ಸಲ್ಲಿಸಿದರು. ಗೋಶಾಲೆಯಲ್ಲಿ ದೇಶಿಯ ಗೋವುಗಳನ್ನು ಕಣ್ತುಂಬಿಕೊಂಡ ಯಡಿಯೂರಪ್ಪ ನವರು ಗೋವುಗಳಿಗೆ ಹಣ್ಣು ತಿನ್ನಿಸಿದರು.

ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪನವರು, ರಾಷ್ಟ್ರೋತ್ಥಾನ ಗೋ ಶಾಲೆಗೆ ಭೇಟಿ ನೀಡಿ ಸಸಿ ನೆಡುವ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಂತೋಷವಾಗಿದೆ. ಗೋವುಗಳ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಭೂಮಿ ಕಾಡು ಗೋವುಗಳ ನಡುವೆ ಅವಿನಾಭವ ಸಂಬಂಧ ಇದೆ. ರಾಷ್ಟ್ರೋತ್ಥಾನ ಪರಿಷತ್ ನ ಈ ಕಾರ್ಯ ಮೆಚ್ಚುವ ಕೆಲಸ ಎಂದು ಶ್ಲಾಘಿಸಿದರು. ದೇಶಿ ತಳಿಗಳ ಸಂರಕ್ಷಣೆ ಅಭಿವೃದ್ಧಿ ಮಾಡುತ್ತಿರುವ ರಾಷ್ಟ್ರೋತ್ಥಾನ ಗೋ ಶಾಲೆ ಇದರೊಂದಿಗೆ ಕಾಡು, ಗುಡ್ಡಗಾಡು ಮಧ್ಯೆ ಕೃಷಿ ಮಾಡುವ ಕಾಯಕ ಮಾಡುತ್ತಿರುವುದು ಮಾದರಿ ಕಾರ್ಯ ಎಂದು ಅಭಿನಂದಿಸಿದರು. ಇದನ್ನೂ ಓದಿ: ಬ್ಯಾನ್ ಕೇವಲ ಗಣೇಶ ಹಬ್ಬಕ್ಕೆ ಸೀಮಿತವಾದ್ರೆ ಸುಮ್ನಿರಲ್ಲ: ಸಿಎಂಗೆ ಯತ್ನಾಳ್ ಎಚ್ಚರಿಕೆ

ಸಿಎಂ ಆಗಿದ್ದಾಗ ಕೃಷಿ ಕಾಯಕಕ್ಕೆ ಜಮೀನು ಮಂಜೂರು ಮಾಡಿದ ಯಡಿಯೂರಪ್ಪನವರಿಗೆ ರಾಷ್ಟ್ರೋತ್ಥಾನ ಗೋ ಶಾಲೆಯ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದರು. ಇದೇ ವೇಳೆ ಈ ಹಿಂದೆ ಬಂದಾಗ ಯಡಿಯೂರಪ್ಪ ನವರು ನೆಟ್ಟಿದ್ದ ಅರಳಿ ಮರವೊಂದು ಬೃಹತ್ ಆಗಿ ಬೆಳೆದು ನಿಂತಿದ್ದು, ಖುದ್ದು ಅರಳಿ ಮರದ ಬಳಿ ತೆರಳಿ ಅರಳಿ ಮರ ವೀಕ್ಷಣೆ ಮಾಡುವ ಮೂಲಕ ಯಡಿಯೂರಪ್ಪನವರು ಸಂತಸಗೊಂಡರು. ನೂರಾರು ಎಕರೆಯ ವಿಶಾಲ ಗುಡ್ಡುಗಾಡು ಪ್ರದೇಶದಲ್ಲಿ 6,500 ವಿವಿಧ ಜಾತಿಯ ಮರಗಳನ್ನು ಬೆಳೆಸಲು ಸಸಿ ನೆಡುವ ಸಪ್ತಾಹ ಕಾರ್ಯಕ್ರಮವನ್ನು ರಾಷ್ಟ್ರೋತ್ಥಾನ ಪರಿಷತ್ ಪ್ರಕಲ್ಪ ಹಮ್ಮಿಕೊಂಡಿದೆ.

ಬಿಎಸ್‍ವೈ ಗೆ ಪುತ್ರ ವಿಜಯೇಂದ್ರ ಹಾಗೂ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಸಾಥ್ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *