ಗೋವಾದಲ್ಲಿ ಮಹಾಮಾರಿ ಕೊರೊನಾಗೆ ಮೊದಲ ಬಲಿ

Public TV
2 Min Read

ಪಣಜಿ: ಕಡಲ ತೀರದ ರಾಜ್ಯ ಗೋವಾದಲ್ಲಿ ಮೊದಲ ಕೊರೊನಾ ಸಾವಿನ ಪ್ರಕರಣ ವರದಿಯಾಗಿದೆ. ಸೋಮವಾರ ಕೋವಿಡ್-19 ಪಾಸಿಟಿವ್ ದೃಢವಾಗಿದ್ದ 85 ವರ್ಷದ ವೃದ್ಧ ಸಾವನ್ನಪ್ಪಿರುವುದಾಗಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.

ಕೋವಿಡ್ ಸಾವಿನ ಕುರಿತು ಟ್ವೀಟ್ ಮಾಡಿದ್ದ ವಿಶ್ವಜಿತ್ ರಾಣೆ, ಮೊದಲು ಸಾವನ್ನಪ್ಪಿದ್ದು ವೃದ್ಧೆ ಎಂದು ಹೇಳಿದ್ದರು. ಆದರೆ ಬಳಿಕ ಸ್ಪಷ್ಟನೆ ನೀಡಿ ವೃದ್ಧ ಸಾವನ್ನಪ್ಪಿರುವುದಾಗಿ ಸ್ಪಷ್ಟಪಡಿಸಿದರು. ಮೃತ ವೃದ್ಧ ದಕ್ಷಿಣ ಗೋವಾ ಜಿಲ್ಲೆಯ ಸತ್ತಾರಿ ತಾಲೂಕಿನ ಮೋರ್ಲೆಮ್ ಗ್ರಾಮದ ನಿವಾಸಿ ಎಂಬ ಮಾಹಿತಿ ಲಭಿಸಿದೆ.

ಮೃತ ವೃದ್ಧನ ಕುಟುಂಬಸ್ಥರಿಗೆ ಸಂತ್ವಾನ ತಿಳಿಸಿರುವ ಸಚಿವರು, ಕೋವಿಡ್-19 ಲಕ್ಷಣದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಅವಧಿಯಲ್ಲೇ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಹಾಗೂ ಸೋಂಕಿತರ ಚಿಕಿತ್ಸೆಗೆ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾದ 140 ದಿನಗಳ ಬಳಿಕ ಗೋವಾದಲ್ಲಿ ಕೋವಿಡ್-19 ಮೊದಲ ಸಾವು ಸಂಭವಿಸಿದೆ. ಜನವರಿ 30 ರಂದು ಕೇರಳದಲ್ಲಿ ವುಹಾನ್‍ನಿಂದ ಆಗಮಿಸಿದ್ದ ಯುವತಿಗೆ ಕೊರೊನಾ ಪಾಟಿಸಿಟಿವ್ ವರದಿ ಕಂಡು ಬಂದಿತ್ತು. ಚಿಕಿತ್ಸೆ ಪಡೆದ ಬಳಿಕ ಯುವತಿ ಕೊರೊನಾದಿಂದ ಗುಣಮುಖರಾಗಿದ್ದರು. ಉಳಿದಂತೆ ದೇಶದಲ್ಲಿ ಮೊದಲ ಕೊರೊನಾ ಸಾವಿನ ಪ್ರಕರಣ ಕಲಬುರಗಿಯಲ್ಲಿ ಮಾರ್ಚ್ 13 ರಂದು ವರದಿಯಾಗಿತ್ತು. ಅಂದು 76 ವರ್ಷದ ವೃದ್ಧ ಕೋವಿಡ್-19 ನಿಂದ ಸಾವನ್ನಪ್ಪಿದ್ದರು.

ಕಳೆದ 24 ಗಂಟೆಗಳ ಅವಧಿಯಲ್ಲಿ ಗೋವಾದಲ್ಲಿ 64 ಹೊಸ ಕೋವಿಡ್ 19 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಗೋವಾದಲ್ಲಿ ಸೋಂಕಿತ ಸಂಖ್ಯೆ 818ಕ್ಕೇರಿದೆ. ಇದುವರೆಗೂ 135 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 683 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾಕ್‍ಡೌನ್ ಸಡಿಲಿಕೆ ಆದ ಬಳಿಕ ಗೋವಾದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿದೆ. ಇತ್ತೀಚೆಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ತಮ್ಮ ರಾಜ್ಯದಲ್ಲಿ ರೈಲು ನಿಲುಗಡೆ ಮಾಡದಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *