ಗೂಳಿಹಟ್ಟಿ ಶೇಖರ್​ಗೆ ಸಚಿವ ಸ್ಥಾನ ನೀಡದಿದ್ರೆ ತಕ್ಕ ಪಾಠ ಎಂದ ಬೆಂಬಲಿಗರು

Public TV
1 Min Read

ಚಿತ್ರದುರ್ಗ: ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತರಲು ಯಡಿಯೂರಪ್ಪಗೆ ನೆರವಾದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‍ಗೆ ಸಚಿವ ಸ್ಥಾನ ನೀಡದಿದ್ದರೆ ಮುಂಬರುವ ಜಿ.ಪಂ ಹಾಗೂ ತಾ.ಪಂ ಚುನಾವಣೆ ವೇಳೆ ತಕ್ಕ ಪಾಠ ಕಲಿಸುವುದಾಗಿ ಅವರ ಬೆಂಬಲಿಗರು ಬಿಜೆಪಿ ಹೈಕಮಾಂಡ್‍ಗೆ ಎಚ್ಚರಿಕೆ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದ ಗಾಂಧಿವೃತ್ತದಿಂದ ತಾಲೂಕು ಕಚೇರಿವರೆಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಗೂಳಿಹಟ್ಟಿ ಶೇಖರ್ ಅಭಿಮಾನಿಗಳು ಹಾಗೂ ಬೆಂಬಲಿಗರು ಬೃಹತ್ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರ ಬೆಂಬಲಿಗ ಚಿತ್ತಯ್ಯ, ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರಲು ನಿಸ್ವಾರ್ಥದಿಂದ ಕೈಜೋಡಿಸಿದ ಶೇಖರ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಅಲ್ಲದೆ ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಸಹ ಇವರಿಗೆ ಸಚಿವ ಸ್ಥಾನ ನೀಡದೇ ಪಕ್ಷ ವಂಚಿಸಿದೆ. ಆದರೂ ಭದ್ರಾ ನೀರು ಕ್ಷೇತ್ರಕ್ಕೆ ಹರಿಸಿದರೆ ಸಾಕೆಂಬ ನಿಟ್ಟಿನಲ್ಲಿ ಪಕ್ಷನಿಷ್ಟೇ ತೋರಿರುವ ನಮ್ಮ ಶಾಸಕರು ಜಿಲ್ಲೆಯಲ್ಲಿ ಕಮಲ ಅರಳಿಸಲು ಶ್ರಮವಹಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮೆಟ್ಟಿಲು ಇಳಿಯುವಾಗ ಕಾಲು ಜಾರಿಬಿದ್ದು ಮಾಜಿ ಸಚಿವ ಸುಧಾಕರ್ ಸಹೋದರ ಸಾವು

ಜಿಲ್ಲೆಯಲ್ಲಿ ನಡೆದ ಎಂ.ಪಿ, ಎಂ.ಎಲ್.ಸಿ ಹಾಗೂ ನಗರಸಭೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಗೂಳಿಹಟ್ಟಿ ಶೇಖರ್ ಅವರು ಸಹಕರಿಸಿದ್ದಾರೆ. ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತಂದಿದ್ದಾರೆ. ಗ್ರಾಮಪಂಚಾಯತ್ ಚುನಾವಣೆ ವೇಳೆಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ ಬಿಜೆಪಿಗ ಬಲ ತಂದಿದ್ದಾರೆ. ಆದ್ದರಿಂದ ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಗೂಳಿಹಟ್ಟಿ ಶೇಖರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಇಲ್ಲವಾದರೆ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ವೇಳೆ ತಕ್ಕ ಪಾಠಕಲಿಸುವುದಾಗಿ ಹಾಗೂ ಸಚಿವ ಸ್ಥಾನ ಸಿಗುವವರೆಗೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *