ಗೂಗಲ್ ಮಾಡಿದ ಈ ಪ್ರಮಾದ ಒಪ್ಪುವಂಥದ್ದಲ್ಲ: ಹೆಚ್‍ಡಿಕೆ ಕಿಡಿ

Public TV
1 Min Read

ಬೆಂಗಳೂರು: ಕನ್ನಡ ಭಾಷೆಯ ವಿಚಾರದಲ್ಲಿ ಗೂಗಲ್ ಮಾಡಿದ ಈ ಪ್ರಮಾದ ಒಪ್ಪುವಂಥದ್ದಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಭಾಷೆ ವಿಚಾರದಲ್ಲಿ ಗೂಗಲ್ ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತದೆ? ‘Ugliest language in India’ ಎಂಬ ಹುಡುಕಾಟಕ್ಕೆ #Kannada ಎಂದು ಉತ್ತರ ನೀಡುತ್ತಿದ್ದ ವೆಬ್ ಪುಟ ತೆಗೆದು ಹಾಕಲು ಕನ್ನಡಿಗರು ಬಂಡೇಳಬೇಕಾಯ್ತೆ? ಯಾವುದೇ ಭಾಷೆ ವಿರುದ್ಧದ ಇಂಥ ದ್ವೇಷವನ್ನು ಮೊದಲೇ ನಿಯಂತ್ರಿಸಲು ಗೂಗಲ್ ಗೆ ಅಸಾಧ್ಯವೇ?

ಕನ್ನಡವೊಂದೇ ಅಲ್ಲ, ಯಾವ ಭಾಷೆಯೂ ಕೆಟ್ಟ, ಕುರೂಪವಲ್ಲ. ಎಲ್ಲ ಭಾಷೆಗಳೂ ಸುಂದರವೇ. ಭಾಷೆ ಭಾವನೆಗಳಿಗೆ ಸಂಬಂಧಿಸಿದ ವಿಷಯ. ಭಾಷೆ ವಿರುದ್ಧ ನಿಂದನೆ ಬಹಳ ನೋವಿನದ್ದು. ಹೀಗಾಗಿ ಈ ವಿಚಾರದಲ್ಲಿ ಗೂಗಲ್ ಸೂಕ್ಷ್ಮವಾಗಿರಬೇಕು. ಕನ್ನಡವನ್ನು ಅವಹೇಳನ ಮಾಡಿದ್ದ ವೆಬ್‍ಪುಟ ಡಿಲಿಟ್ ಆಗಿರಬಹುದು. ಆದರೆ, ಅದರಿಂದ ಕನ್ನಡಿಗರಿಗಾದ ನೋವಿಗೇನು ಪರಿಹಾರ?

ಗೂಗಲ್ ಮಾಡಿದ ಈ ಪ್ರಮಾದ ಒಪ್ಪುವಂಥದ್ದಲ್ಲ. ಭಾಷೆ ವಿಚಾರದಲ್ಲಿ ಯಾರೇ ಅದರೂ ಇನ್ನು ಮುಂದೆ ಎಚ್ಚರವಾಗಿರಬೇಕು. ಅದರಲ್ಲೂ ಕನ್ನಡದ ವಿಚಾರದಲ್ಲಂತೂ ಎಲ್ಲರೂ ಎರಡು ಪಟ್ಟು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ, ಒಂದೇ ಗಂಟೆಯಲ್ಲಿ ಸೃಷ್ಟಿಯಾದ ಕನ್ನಡಿಗರ ಸ್ವಾಭಿಮಾನದ ಅಲೆ, ಮರುಗಳಿಗೆಯಲ್ಲಿ ಸುನಾಮಿಯಾಗಿ ಪರಿಣಮಿಸಿದರೆ ಅಚ್ಚರಿ ಇಲ್ಲ.

ಇದು ನಿನ್ನ ಭಾಷೆ, ಇದು ದೇಶಭಾಷೆ, ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯಭಾಷೆ, ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿದಾರ್ಶನಿಕರನ್ನೂ ಹಡೆದಿರುವ ಭಾಷೆ ಎಂದು ಕುವೆಂಪು ಅವರ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಆಗಿದ್ದು ಏನು?
www.debtconsolidationsquad.com ವೆಬ್‍ಸೈಟ್‍ Which is the ugliest language in india ಪ್ರಶ್ನೆಗೆ ಕನ್ನಡ ಉತ್ತರವನ್ನು ನೀಡಿತ್ತು. ಈ ಪುಟದಲ್ಲಿರುವ ಮಾಹಿತಿ ಗೂಗಲ್ ಸರ್ಚ್‍ನಲ್ಲಿ ಕಾಣುತ್ತಿತ್ತು.

ಗೂಗಲ್ ಸರ್ಚ್‍ನಲ್ಲಿ ಈ ಮಾಹಿತಿ ಕಾಣುತ್ತಿದ್ದಂತೆ ಇಂದು ಭಾರೀ ಸಂಖ್ಯೆಯಲ್ಲಿ ಕನ್ನಡಿಗರು ರಿಪೋರ್ಟ್ ಮಾಡಲು ಆರಂಭಿಸಿದರು. ಜನರ ರಿಪೋರ್ಟ್ ಗಮನಿಸಿದ ಗೂಗಲ್ ಸರ್ಚ್ ಈಗ ಆ ಉತ್ತರ ಪ್ರದರ್ಶನವಾಗುತ್ತಿದ್ದ ಪುಟವನ್ನೇ ಸರ್ಚ್‍ನಿಂದ ತೆಗೆದು ಹಾಕಿದೆ.

Share This Article
Leave a Comment

Leave a Reply

Your email address will not be published. Required fields are marked *