ಬೆಂಗಳೂರು: ಗುಜರಾತ್ ನ ಡೊಲೆರೋ ಸಿಟಿ ಮಾಡಲ್ ಕರ್ನಾಟಕಕ್ಕೆ ಬೇಡ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರ ಮತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿರುದ್ಧ ಕಿಡಿಕಾರಿದ್ದಾರೆ.
ಗುಜರಾತ್ ಮಾಡೆಲ್ ನೋಡಲು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗುಜರಾತ್ ಪ್ರವಾಸ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ತೆರಿಗೆ ಹಣವನ್ನು ಬೇರೆ ರಾಜ್ಯದ ಮಾಡಲ್ ನೋಡುವುದಕ್ಕೆ ವ್ಯಯ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ನಲ್ಲಿ ಮೋದಿ ಅವರ ಡ್ರೀಮ್ ಪ್ರಾಜೆಕ್ಟ್ ಡೊಲೆರೋ ಸಿಟಿ ಬಗ್ಗೆ ಅಧ್ಯಯನಕ್ಕೆ ಹೋಗ್ತಿದ್ದೀರಾ. ನರೇಂದ್ರ ಮೋದಿ ಅವರು 2014 ರಲ್ಲಿ ಚುನಾವಣೆಗೋಸ್ಕರ ಈ ಡೊಲೆರೋ ಸಿಟಿ 3ಡಿ ಪ್ರಾಜೆಕ್ಟ್ ಘೋಷಣೆ ಮಾಡಿದ್ದರು. ಇದೊಂದು ದೇಶದಲ್ಲೇ ಕ್ರಾಂತಿ ಮಾಡುವ ಪ್ರಾಜೆಕ್ಟ್ ಎಂದು ಹೇಳಿದರು. ಆದರೆ ಇವತ್ತು ಡೊಲೆರೋ ಸಿಟಿ ಪ್ರಾಜೆಕ್ಟ್ ಗುಜರಾತ್ ಜನರು ಕೂಡಾ ಈಗ ಮರೆತು ಹೋಗಿದ್ದಾರೆ. 2008 ರಲ್ಲಿ ಪ್ರಾರಂಭ ಆದ ಈ ಡೊಲೆರೋ ಸಿಟಿ ಪ್ರಾಜೆಕ್ಟ್ 2021 ಆದರೂ ಮುಗಿದಿಲ್ಲ. ಇದನ್ನು ನೋಡುವುದಕ್ಕೆ ಜಗದೀಶ್ ಶೆಟ್ಟರ್ ಹೊರಟಿದ್ದಾರೆ. ಈ ಡೊಲೆರೋ ಸಿಟಿ ಪ್ರಾಜೆಕ್ಟ್ ನೋಡಲು ಗುಜರಾತ್ ಗೆ ಹೋಗುವುದು ಬೇಡ. ಯೂಟ್ಯೂಬ್ ನಲ್ಲಿ ನೋಡಿದರೆ ಸಾಕು ಯಾವ ಸ್ಥಿತಿಯಲ್ಲಿ ಪ್ರಾಜೆಕ್ಟ್ ಇದೆ ಅಂತ ಗೊತ್ತಾಗುತ್ತೆ ಎಂದು ಕಿಡಿಕಾರಿದ್ದಾರೆ.
ನಮ್ಮ ರಾಜ್ಯದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳು ದೇಶಕ್ಕೆ ಮಾಡಲ್ ಆಗಿರುವ ಉದಾಹರಣೆಗಳಿವೆ. ಡೊಲೆರೋ ಸಿಟಿ ನೋಡಲು ಹೋಗಿ ಕರ್ನಾಟಕ ಕಟ್ಟಬೇಕಾದ ಅವಶ್ಯಕತೆ ಇಲ್ಲ. ಡೊಲೆರೋ ಸಿಟಿ ಮಾಡಲ್ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇಲ್ಲ. ನಮಗೆ ಬೇಕಾಗಿರುವುದು ಜನರ ಬದುಕು. ಜನರು ಬದಕಲು ಏನು ಮಾಡಬೇಕೋ ನೋಡಿ. ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಸೃಷ್ಟಿಗೆ ಏನ್ ಮಾಡಬೇಕು ಅಂತ ಇಲ್ಲಿ ಕೂತು ಚರ್ಚೆ ಮಾಡಬೇಕು. ಅದು ಬಿಟ್ಟು ಡೊಲೆರೋ ಸಿಟಿ ಕಟ್ಟೋ ಅವಶ್ಯತೆ ಇಲ್ಲ. ಡೊಲೆರೋ ಸಿಟಿ ಮುಕ್ತಾಯ ಆಗಲು ಇನ್ನು 100 ವರ್ಷ ಬೇಕು. ಹೀಗಾಗಿ ಜಗದೀಶ್ ಶೆಟ್ಟರ್ ಗುಜರಾತ್ ಮಾಡಲ್ ಬಿಟ್ಟು ರಾಜ್ಯದಲ್ಲೆ ಉತ್ತಮ ಮಾಡಲ್ ಮಾಡಿ ಅಂತ ಸಲಹೆ ನೀಡಿದ್ದಾರೆ.
ಇದೇ ವೇಳೆ ಡೊಲೆರೋ ಸಿಟಿ ಮುಗಿದಿಲ್ಲ ಆಗಲೇ ಅಯೋಧ್ಯೆಯಲ್ಲಿ 10 ಸಿಟಿ ಘೋಷಣೆ ಮಾಡಿದ್ದಾರೆ. ಯುಪಿ ಚುನಾವಣೆ ಇರುವುದರಿಂದ ಬಿಜೆಪಿ ಯುಪಿಯಲ್ಲಿ 3ಡಿ ತೋರಿಸುತ್ತಿದೆ. 3ಡಿ ಯಲ್ಲಿ ಏನು ಬೇಕಾದರೂ ತೋರಿಸಿಕೊಳ್ಳಬಹುದು. ಯಾವುದೇ ರಾಜ್ಯದ ಮಾಡಲ್ ಅಂತ ಹೋಗಿ ನಮ್ಮ ರಾಜ್ಯದ ಗೌರವ ಹಾಳು ಮಾಡಬೇಡಿ. ನಮ್ಮ ರಾಜ್ಯದಲ್ಲೇ ಉತ್ತಮ ಕಾರ್ಯಕ್ರಮ ಕೊಡುವವರು ಬೇಕಾದಷ್ಟು ಜನ ಇದ್ದಾರೆ. ಅವರನ್ನು ಬಳಕೆ ಮಾಡಿಕೊಂಡು ಕೆಲಸ ಮಾಡಿ ಅಂತ ಸರ್ಕಾರ ಮತ್ತು ಜಗದೀಶ್ ಶೆಟ್ಟರ್ ಗೆ ಕುಮಾರಸ್ವಾಮಿ ಸಲಹೆ ಕೊಟ್ಟಿದ್ದಾರೆ. ಇದನ್ನೂ ಓದಿ:ನಾನು ದಲಿತ ಅಲ್ಲ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು: ಗಂಗಾಧರ್