ಗಾಯಗೊಂಡಿರುವವನಿಗೆ ಗಾಯದ ಆಳ, ನೋವು ಗೊತ್ತು: ಡಿಕೆ ಶಿವಕುಮಾರ್

Public TV
2 Min Read

ಬೆಂಗಳೂರು: ನಿನ್ನೆಯಷ್ಟೇ ತಮ್ಮ ನಿವಾಸ ಹಾಗೂ ಆಪ್ತರ ಮೇಲೆ ನಡೆದಿರುವ ಸಿಬಿಐ ದಾಳಿಯ ಕುರಿತ ನೋವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೊರಹಾಕಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್ ಅವರು, ನಾನು ದೆಹಲಿಯಲ್ಲಿ ಸುರೇಶ್ ಮನೆಗೆ ಫೋನ್ ಮಾಡಿದ್ದೆ. ಅಲ್ಲಿ 1.50 ಲಕ್ಷ ರೂ. ಹಣ, ನಮ್ಮ ಮನೆಯಲ್ಲಿ 1.77 ಲಕ್ಷ ರೂ., ನಮ್ಮ ಮನೆ ಪಕ್ಕದ ಕಚೇರಿಯಲ್ಲಿ 3.50 ಲಕ್ಷ ರೂ. ಸಿಕ್ಕಿದೆ. ಆದರೆ ನಮ್ಮ ತಾಯಿ ಮನೆಯಲ್ಲಿ ಏನು ಇಲ್ಲ. ದೊಡ್ಡ ಆಲಹಳ್ಳಿ, ಕನಕಪುರ ಮನೆಯಲ್ಲಿ ಏನು ಇಲ್ಲ. ಮುಂಬೈಯಲ್ಲಿ ಮಗಳ ಹೆಸರಲ್ಲಿ ಒಂದು ಫ್ಲಾಟ್ ಇದೆ. ಆದರೆ ನಾನು ಅಲ್ಲಿಗೆ ಹೋಗದೆ 6 ವರ್ಷ ಆಗಿದೆ ಎಂದು ಮಾಹಿತಿ ನೀಡಿದರು.

ನನ್ನ ಕೋ ಬ್ರದರ್ ಶಶಿಕುಮಾರ್ ಮನೆಯಿಂದ 2-3 ದಾಖಲೆ ತೆಗೆದುಕೊಂಡು ಹೋಗಿದ್ದಾರೆ. ಹಾಸನದ ಸಚಿನ್ ನಾರಾಯಣ್ ಮನೆಯಲ್ಲಿ 50 ಲಕ್ಷ ರೂ. ಹಣ ಸಿಕ್ಕಿದೆ. ಉಳಿದಂತೆ ದವನಂ ಜ್ಯುವೆಲ್ಲರ್ಸ್ ಸಚಿನ್ ಮನೆಯಲ್ಲಿ ಹಣ ಸಿಕ್ಕಿಲ್ಲ. ಈ ಕುರಿತ ಪಂಚನಾಮೆ ಬೇಕಾದರೆ ಬಿಡುಗಡೆ ಮಾಡುತ್ತೇನೆ. ಸಿಬಿಐ ದಾಳಿ ವೇಳೆ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಆಗಿದೆ ಎಂಬ ಬಗ್ಗೆ ಮಾಹಿತಿ ಇದೆ. ನಮ್ಮ ಪಿಎಗೆ ಹೊಡೆದಿದ್ದಾರೆ. ಅವನು ಅಳುತ್ತಿದ್ದ, ಆದ್ದರಿಂದ ನಾನು ಜಾಸ್ತಿ ಕೇಳಿಲ್ಲ. ಪರಮೇಶ್ವರ್ ಪಿಎ ತರ ಆಗೋದು ಬೇಡ ಎಂದು ಹೆಚ್ಚು ಮಾತನಾಡಿಲ್ಲ ತಿಳಿಸಿದರು.

ಪ್ರಹ್ಲಾದ್ ಜೋಶಿ ಅವರು ಬಹಳ ದೊಡ್ಡವರು. ಮೊದಲು ಅವರು ಅವರ ಪಕ್ಷದ ನಾಯಕರ ಬಗ್ಗೆ ರಿಲೀಸ್ ಮಾಡಲಿ. ನನಗೆ ಇನ್ನು ಯಾವುದೇ ಸಮನ್ಸ್ ಬಂದಿಲ್ಲ. ನಮ್ಮ ಕಾನೂನು ಹೋರಾಟದ ಸಿದ್ಧತೆ ನಾವು ಮಾಡಿಕೊಳ್ಳುತ್ತೇವೆ. ಸದ್ಯಕ್ಕೆ ಗಾಯ ಆಗಿದೆ. ಗಾಯ ಆದವನಿಗೆ ಗೊತ್ತು ಆ ನೋವು ಏನಿರುತ್ತೆ ಅಂತಾ ಗೊತ್ತು. ಗಾಯ ಆಗಿರುವವನಿಗೆ ಗೊತ್ತು ಗಾಯದ ಆಳ, ಒಳಗೆ ಎಷ್ಟು ನೋವಿದೆ ಎಂಬುವುದು ಗೊತ್ತಾಗುತ್ತೆ. ಸಮಯ ಸಿಗಲಿ ಮಾತನಾಡೋಣ ಎಂದರು.

ಸಿಬಿಐ ದಾಳಿ ರಾಜಕೀಯ ಪ್ರೇರಿತ ಕೃತ್ಯವಾಗಿದ್ದು, ನನ್ನ ಮೇಲಿನ ಕೇಸ್ ಯಾವಾಗ ಆಗಿದೆ. ಸಿಬಿಐ ಕೇಸ್ ದಾಖಲು ಮಾಡಿಸಿದ್ದು ಯಾವಾಗ? ನಾನು ಪಕ್ಷದ ಅಧ್ಯಕ್ಷನಾಗಿದ್ದು ಯಾವಾಗ? ಇದನ್ನು ಅರ್ಥ ಮಾಡಿಕೊಂಡರೆ ಉತ್ತರ ಸಿಗಲಿದೆ ಎಂದರು.

ಆರ್.ಆರ್ ನಗರಕ್ಕೆ ಕ್ಷೇತ್ರದ ಬೈ ಎಲೆಕ್ಷನ್‍ನಲ್ಲಿ ಕುಸುಮಾ ಅಭ್ಯರ್ಥಿ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಕೆಶಿ, ಸಿದ್ದರಾಮಯ್ಯ ಅವರು ನಮ್ಮ ಸಿಎಲ್‍ಪಿ ನಾಯಕರು. ಅವರಿಗೂ ಎಲ್ಲಾ ಮಾಹಿತಿ ಗೊತ್ತಾಗಿರುತ್ತದೆ. ನಾನು ಎಲ್ಲವನ್ನೂ ತಿಳಿದುಕೊಂಡು ಹೇಳ್ತೇನೆ ಎಂದು ಪರೋಕ್ಷವಾಗಿ ಕುಸುಮಾ ಅವರೇ ನಮ್ಮ ಅಭ್ಯರ್ಥಿ ಎಂಬ ಸುಳಿವು ನೀಡಿದರು.

ದೇಶದಲ್ಲಿ ಆಗುತ್ತಿರುವ ರೈತರ ಹೋರಾಟ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ತರುತ್ತಿರುವ ತಿದ್ದುಪಡಿ ರಾಜ್ಯದ ಹಿತಾಸಕ್ತಿಯನ್ನು ಮರೆತು ಬಂಡವಾಳ ಶಾಹಿಗಳ ಪರ ಆಗುತ್ತಿರುವ ಕಾನೂನುಗಳಾಗಿವೆ. ಈಗಾಗಲೇ ಇದರ ವಿರುದ್ಧ ನಾವು ಪ್ರತಿಭಟನೆ ನಡೆಸಿದ್ದೇವೆ. ಈ ಕುರಿತ ರಾಜ್ಯ ಮಟ್ಟದ ಕಿಸಾನ್ ಸಮ್ಮೇಳನ ಅ.10 ರಂದು ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಸಭೆಯಲ್ಲಿ ಕೋಡಿಹಳ್ಳಿ ಸೇರಿದಂತೆ ರೈತ ಮುಖಂಡರು ಭಾಗಿ ಆಗಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸಚಿವರೊಬ್ಬರು ಹೋರಾಟ ಮಾಡುವವರನ್ನು ರೈತರೇ ಅಲ್ಲ ಎಂದು ಹೇಳಿದ್ದಾರೆ. ಆದರೆ ತಿದ್ದುಪಡಿಗಳನ್ನು ವಿರೋಧಿಸಿ ಕೇಂದ್ರ ಸಚಿವರಾದ ಕೌರ್ ಅವರು ರಾಜೀನಾಮೆ ನೀಡಿದ್ದಾರೆ. ಆದರೆ ಸರ್ಕಾರದ ಈ ಕ್ರಮಕ್ಕೆ ಮುಂದಿನ ದಿನಗಳಲ್ಲಿ ರೈತರು ತಕ್ಕ ಉತ್ತರ ಕೊಡಲಿದ್ದಾರೆ. ನಮ್ಮ ಹೋರಾಟ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಮುಂದುವರಿಯುತ್ತದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *