ಗಾನಚಂದ್ರಿಕೆಯ ಚೈತನ್ಯ ಗೀತೆ ಲೋಕಾರ್ಪಣೆ – ಯುಗದ ಆದಿಗೆ ಗಾನಚಂದ್ರಿಕಾ ಸಂಗೀತ ಶಾಲೆಯ ಕೊಡುಗೆ!

Public TV
2 Min Read

ದೆಂಥದ್ದೇ ಸಂದಿಗ್ಧ ಘಳಿಗೆಯಲ್ಲಿಯೂ ಕೂಡಾ ಆಶಾವಾದದ ಸೆಳೆಮಿಂಚು ಮೂಡಿಸುವ ಚುಂಬಕ ಶಕ್ತಿ ಸಂಗೀತಕ್ಕಿದೆ. ಎಲ್ಲ ದಾರಿಗಳೂ ಮುಗಿದು ಹೋಯಿತೆಂಬ ನಿರಾಶೆಯ ನೆತ್ತಿಯಲ್ಲಿ ಹೊಸ ಭರವಸೆಯ ಚಿಗುರು ಮೊಳೆಯಿಸುವ ತಾಕತ್ತು ಬಹುಶಃ ಸಂಗೀತಕ್ಕಲ್ಲದೆ ಬೇರೆ ಯಾವುದಕ್ಕೂ ಇರಲು ಸಾಧ್ಯವೇ ಇಲ್ಲವೇನೋ. ಅದರಲ್ಲಿಯೂ ಎದೆಯ ಮಿದುವಿಗೆ ನವಿರಾಗಿ ತಾಕುವ ಭಾವ ಗೀತೆಗಳಿಗಂತೂ ಆ ಶಕ್ತಿ ತುಸು ಹೆಚ್ಚೇ ಇದೆ. ಅದನ್ನು ಲಾಗಾಯ್ತಿನಿಂದಲೂ ಮತ್ತಷ್ಟು ಪಸರಿಸುವ ನಿಟ್ಟಿನಲ್ಲಿ ಗಾನ ಸುಧೆ ಹರಿಸುತ್ತಾ ಬಂದಿರುವವರು ಸುಗಮ ಸಂಗೀತ ಕ್ಷೇತ್ರದ ಪ್ರಸಿದ್ಧ ಗಾಯಕಿ ನಾಗಚಂದ್ರಿಕಾ ಭಟ್. ಇದೀಗ ಅವರ ಸಾರಥ್ಯದ ಗಾನಚಂದ್ರಿಕಾ ಸಂಗೀತ ಶಾಲೆಯ ಕಡೆಯಿಂದ ಯುಗಾದಿಯ ಹೊಸ್ತಿಲಿಗೆ ನವಚೈತನ್ಯದ ತೋರಣ ಕಟ್ಟುವಂಥಾದ್ದೊಂದು ಚೆಂದದ ಗೀತೆ ತಯಾರಾಗಿದೆ. ಅದನ್ನಿಂದು ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ ಲೋಕಾರ್ಪಣೆಗೊಳಿಸಿದ್ದಾರೆ.

ಇಲ್ಲಿ ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಸಾಹಿತಿ ಮೈ.ವೆಂ ಸೀತಾರಾಮಯ್ಯನವರು ಬರೆದಿರುವ ಕವಿತೆಯೊಂದು ಸುಂದರ ಹಾಡಾಗಿದೆ. ‘ತೆರೆ ಕಿಟಕಿ ಬಾಗಿಲ ಬೀಸಿ ಬರಲಿ ಗಾಳಿ ನವಯುಗವೈ ತಾಳಿ’ ಎಂಬ ಆಶಯದೊಂದಿಗೆ ಶುರುವಾಗುವ ಈ ಹಾಡು ನಾಗಚಂದ್ರಿಕಾ ಭಟ್ ಅವರ ಚೆಂದದ ಪರಿಕಲ್ಪನೆಯೊಂದಿಗೆ ಮೂಡಿ ಬಂದಿದೆ. ವಿಕಾಸ್ ವಸಿಷ್ಟ ಸಂಗೀತ ಸಂಯೋಜನೆ ಮಾಡಿರುವ ಈ ಹಾಡು ಸತ್ಯಾತ್ಮ ಸ್ಟುಡಿಯೋ ಕಡೆಯಿಂದ ಚಿತ್ರೀಕರಿಸಲ್ಪಟ್ಟಿದೆ. ಶ್ರೀನಿಧಿ ವಿಡಿಯೋ ಚಿತ್ರೀಕರಣ ಮತ್ತು ಪೃಥ್ವಿಶ್ ಅವರ ಸಂಕಲನ ಹಾಗೂ ಆನ್‍ಲೈನ್ ನಿರ್ವಹಣೆಯಿದೆ.

ಈ ಹಾಡನ್ನು ನಾಗಚಂದ್ರಿಕಾ ಭಟ್ ತಮ್ಮ ಸಂಗೀತ ಶಾಲೆಯ ವಿದ್ಯಾರ್ಥಿಗಳೊಡಗೂಡಿ ಪ್ರಚುರಪಡಿಸಿದ್ದಾರೆ. ಅದರ ಸಂಗೀತ, ಧ್ವನಿ ಮತ್ತು ಚಿತ್ರೀಕರಣಗಳಲ್ಲಿ ಭಾವಗೀತೆಗಳ ಅಸಲಿ ಸ್ವಾದದ ಘಮವಿದೆ. ಗಾನಚಂದ್ರಿಕಾ ಸಂಗೀತ ಶಾಲೆಯ ಅಷ್ಟೂ ವಿದ್ಯಾರ್ಥಿಗಳು ನವ ಸಂವತ್ಸರವನ್ನು ಉತ್ಸಾಹದಿಂದ ಎದುರುಗೊಳ್ಳುವ ಆಹ್ಲಾದ ತುಂಬುವಂತೆ ಈ ಹಾಡಿಗೆ ರಂಗು ತುಂಬಿದ್ದಾರೆ. ಇದೊಂದು ಯುಗಾದಿಯ ಆಶಯಗೀತೆಯಾಗಿ ಮಾತ್ರವೇ ಗಮನ ಸೆಳೆಯೋದಿಲ್ಲ; ಬದಲಾಗಿ ಇಡೀ ಜಗತ್ತನ್ನು ಕಣ್ಣಿಗೆ ಕಾಣದೊಂದು ವೈರಸ್ ಆವರಿಸಿಕೊಂಡಿರೋ ಈ ದಿನಮಾನವನ್ನು ಆತ್ಮಬಲದಿಂದ ದಾಟಿಕೊಳ್ಳುವ ಧೀಶಕ್ತಿಯನ್ನೂ ಕೂಡಾ ಪ್ರತೀ ಮನಸುಗಳಿಗೆ ದಾಟಿಸುವಂತಿದೆ.

ಸಾಹಿತ್ಯ ಮತ್ತು ಅದರ ಮಾಧುರ್ಯದ ಮತ್ತೊಂದು ಆವೃತ್ತಿಯಂತಿರುವ ಭಾವಗೀತೆಗಳು ಯಾವತ್ತಿದ್ದರೂ ಪ್ರೇರಕ ಶಕ್ತಿಯೇ. ಇಂಥಾ ಸ್ವರಗಳು ಯಾವುದೋ ಚಿಂತೆಯ ಚಿತೆಯಿಂದ ಅದೆಷ್ಟೋ ಜನರನ್ನು ಪಾರುಗಾಣಿಸಿವೆ. ಹಾಗಿರುವಾಗ ಈವತ್ತಿನ ಕೊರೋನಾ ಸಂದಿಗ್ಧವನ್ನು ಹಾದು ಹೋಗುವಂತೆ ಮಾಡಬಲ್ಲ ಶಕ್ತಿಯೂ ಭಾವಗೀತೆಗೆ ಖಂಡಿತವಾಗಿಯೂ ಇದ್ದೇ ಇದೆ. ಈ ಹಾಡನ್ನೊಮ್ಮೆ ಕೇಳಿದಾಗ ಕಡೇಯಲ್ಲಿ ಉಳಿದುಕೊಳ್ಳುತ್ತದೆಯಲ್ಲಾ ಆತ್ಮತೃಪ್ತಿ, ಅದು ಮೇಲ್ಕಂಡ ಮಾತುಗಳಿಗೆ ಸಾಕ್ಷಿಯಂತೆ ಗೋಚರಿಸುತ್ತದೆ. ಈ ಯುಗಾದಿಯಿಂದಾದರೂ ಕೊರೊನಾ ಕಾಟದಿಂದ ಮುಕ್ತಿ ಸಿಗಲೆಂಬುದು ಜಗತ್ತಿನ ಆಶಯವಾಗಿತ್ತು. ಆದರೀಗ ಅದು ಮತ್ತೆ ಮುತ್ತಿಕೊಂಡಿದೆ. ಅಂಥಾ ಎಲ್ಲ ಅವಘಡಗಳ ಕಾವಳ ಕರಗಿ ಮತ್ತೆ ಹೊಸ ಗಾಳಿ ಬೀಸಿ ಬರಲೆಂಬ ಆಶಯದ ಈ ಗೀತೆಯನ್ನು ಶಾಸಕ ರವಿಸುಬ್ರಹ್ಮಣ್ಯ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ನೀವೂ ಒಮ್ಮೆ ಕೇಳಿ ನೋಡಿ. ಖಂಡಿತಾ ನಿಮಗಿಷ್ಟವಾಗದಿರೋದಿಲ್ಲ!

Share This Article
Leave a Comment

Leave a Reply

Your email address will not be published. Required fields are marked *