ಗಾಂಜಾಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ಹತ್ಯೆಗೈದ ತಾಯಿ

Public TV
1 Min Read

ಹೈದರಾಬಾದ್: ಗಾಂಜಾ ಚಟಕ್ಕೆ ದಾಸನಾಗಿದ್ದ 17 ವರ್ಷದ ಮಗನನ್ನು ತಾಯಿಯೇ ಕೊಂದಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಪಟ್ಟಣದಲ್ಲಿ ನಡೆದಿದೆ. ಗಾಂಜಾಕ್ಕಾಗಿ ಹಣ ನೀಡುವಂತೆ ಯುವಕ ತಾಯಿಯನ್ನು ಪೀಡಿಸಿದ್ದಾಗ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೌರ ಕಾರ್ಮಿಕಳಾಗಿ ಕೆಲಸ ಮಾಡಿಕೊಂಡಿದ್ದ ಆರೋಪಿ ಸುಮಲತಾ, ತನ್ನ ಮಗನೊಂದಿಗೆ ಗುಂಟೂರಿನ ಎಟಿ ಅಗ್ರಹಾರಂ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು. ಪತಿ ಮರಣದ ನಂತರ ಮನೆ ನಡೆಸಲು ಒಬ್ಬಳೇ ದುಡಿಯುತ್ತಿದ್ದ ತಾಯಿ ಬಳಿ ಗಾಂಜಾ ಖರೀದಿಸಲು ಹಣ ನೀಡು ಎಂದು ಸಿದ್ಧಾರ್ಥ್ ಆಗಾಗ ಪೀಡಿಸುತ್ತಿದ್ದನು. ಇದರಿಂದ ಕೋಪಗೊಂಡ ತಾಯಿ ಮಗನನ್ನು ಕೊಲೆ ಮಾಡಿದ್ದಾಳೆ.

ಶನಿವಾರ ಮನೆಯಿಂದ ಹೊರಡುವಾಗ ಸುಮಲತಾ ಕೊನೆಗೂ ಅವನನ್ನು ಮುಗಿಸಿ ಬಿಟ್ಟೆ ಎಂದು ಹೇಳಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡ ನೆರೆಹೊರೆಯವರು ಅನುಮಾನಗೊಂಡು ಮನೆ ಒಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿದ್ಧಾರ್ಥ್ ಮೃತದೇಹ ಪತ್ತೆಯಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆ ಕುರಿತಂತೆ ಆರೋಪಿ ಸುಮಲತಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ (302)ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *