ಗವರ್ನರ್ ಭೇಟಿ ಮಾಡಿದ ಸಿಎಂ ಬಿಎಸ್‍ವೈ- ಸಂಪುಟ ವಿಸ್ತರಣೆ ಚರ್ಚೆ!

Public TV
1 Min Read

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ಬೆಳಗ್ಗೆ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿದ್ದಾರೆ.

ಎಚ್‍ಎಸ್‍ಆರ್ ಲೇಔಟ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಹೊರಟಿದ್ದ ಸಿಎಂ ಮಾರ್ಗ ಮಧ್ಯೆ ರಾಜ್ಯಪಾಲರ ಭೇಟಿ ಮಾಡಿದ್ದಾರೆ. ಸಿಎಂ ಬಿಎಸ್‍ವೈ ಅವರು ಏಕಾಏಕಿ ರಾಜ್ಯಪಾಲರ ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ರಾಜ್ಯ ರಾಜಕೀಯ ವಲಯದಲ್ಲಿ ಸಂಪುಟ ಸರ್ಜರಿ ಸಂಬಂಧ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಸಿಎಂ ಅವರು ರಾಜಭವನಕ್ಕೆ ಭೇಟಿ ನೀಡಿದ್ದು, ಸಂಪುಟ ವಿಸ್ತರಣೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಸುಮಾರು 20 ನಿಮಿಷಗಳ ಕಾಲ ರಾಜ್ಯಪಾಲರ ಜೊತೆ ಸಿಎಂ ಚರ್ಚೆ ನಡೆಸಿದ್ದಾರೆ.

ಕೆಲ ಸಮಯದ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಜ್ಯಪಾಲರು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಭೇಟಿ ವೇಳೆ ಸಿಎಂ ಅವರು ಹಬ್ಬದ ಶುಭಕೋರಿ, ಆರೋಗ್ಯ ವಿಚಾರಿಸಿದ್ದಾರೆ. ಸಿಎಂ ಬಿಎಸ್‍ವೈ ರಾಜಭವನದ ಭೇಟಿ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಾಥ್ ನೀಡಿದ್ದಾರೆ. ಅಂದಹಾಗೇ ರಾಜ್ಯಪಾಲರು ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಸಿಎಂ ಬಿಎಸ್‍ವೈ ಅವರು ಎರಡನೇ ಬಾರಿಗೆ ಭೇಟಿ ಮಾಡಿದ್ದಾರೆ.

ರಾಜ್ಯಪಾಲರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ರಾಜ್ಯಪಾಲರು ನಮ್ಮನ್ನ ಕರೆದಿದ್ದರು. ಕೆಲ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಕೊರೊನಾ ನಿಯಂತ್ರಣದ ಕುರಿತು ತೆಗೆದುಕೊಂಡ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಮವಹಿಸಲು ಸೂಚಿಸಿದ್ದಾರೆ. ಅಲ್ಲದೇ ಆಯುರ್ವೇದಕ್ಕೆ ಒತ್ತು ಕೊಡಿ ಎಂದಿದ್ದು, ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಡ್ರಗ್ಸ್ ದಂಧೆಯ ವಿರುದ್ಧ ಸರ್ಕಾರ ಹಾಗೂ ಪೊಲೀಸರು ಕೈಗೊಳ್ಳುತ್ತಿರುವ ಕ್ರಮಕ್ಕೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯ ಮಾಡಿ ಅಂತ ಹೇಳಿದ್ದಾರೆ. ಗುಟ್ಕಾದಲ್ಲಿ ಡ್ರಗ್ ಬರುತ್ತೆ ಎಂಬ ಮಾಹಿತಿ ಇದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಎಂದಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *