ನವದೆಹಲಿ: ಭಾರತ, ಚೀನಾ ನಡುವಿನ ಗಲ್ವಾನ್ ಘರ್ಷಣೆಯ ವಿವಾದ ತಣ್ಣಗಾಗುತ್ತಿದ್ದಂತೆ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಮತ್ತೆ ಚಿಗುರೊಡೆದಿದೆ. ಈ ಮೊದಲು ತಡೆ ನೀಡಿದ್ದ 150 ಹೂಡಿಕೆಗಳ ಪೈಕಿ ಸುಮಾರು 45 ಹೂಡಿಕೆಗಳಿಗೆ ಭಾರತ ಮತ್ತೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ.
ಗ್ರೇಟ್ ವಾಲ್ ಮೋಟರ್ ಮತ್ತು ಸೈಕ್ ಮೋಟರ್ ಕಾರ್ಪ್ ಸಹಿತ ಇತರ 45 ಹೂಡಿಕೆಗಳಿಗೆ ಭಾರತ ಸರ್ಕಾರ ಮರು ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಸರ್ಕಾರ ಮತ್ತು ಕೈಗಾರಿಕಾ ಮೂಲಗಳಿಂದ ತಿಳಿದು ಬಂದಿದೆ ಎಂದು ಮಾಧ್ಯಮವೊಂದು ವರದಿಮಾಡಿದೆ.
ಈ ಎಲ್ಲಾ ಹೂಡಿಕೆಗಳಿಗೆ ಭಾರತ ಹಾಗೂ ಚೀನಾದ ಕಂಪನಿಗಳ ನಡುವೆ ಕಳೆದ ವರ್ಷವೇ ಒಪ್ಪಂದ ನಡೆದಿತ್ತು. ಆದರೆ ಗಲ್ವಾನ್ ಘರ್ಷಣೆಯಿಂದಾಗಿ ಭಾರತ 2 ಶತಕೋಟಿ ಡಾಲರ್ ಮೌಲ್ಯದ 150 ವಿವಿಧ ಹೂಡಿಕೆಗಳಿಗೆ ತಡೆ ನೀಡಿತ್ತು. ಈಗ ಭಾರತ ಮತ್ತೆ ಈ ಎಲ್ಲಾ ಹೂಡಿಕೆಗಳನ್ನು ಪರಿಶೀಲಿಸುವ ಸಾಧ್ಯತೆಯಿದೆ.
ಕೇಂದ್ರ ಗೃಹ ಸಚಿವಾಲಯದಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇತರ ಸರ್ಕಾರಿ ಮೂಲದ ಮಾಹಿತಿ ಮತ್ತು ಕೈಗಾರಿಕಾ ಮೂಲದಿಂದ ತಿಳಿದು ಬಂದ ಮಾಹಿತಿ ಪ್ರಕಾರ ಗ್ರೇಟ್ ವಾಲ್ ಮತ್ತು ಜನರಲ್ ಮೋಟರ್ಸ್, ಅಮೆರಿಕ ಕಾರು ತಯಾರಿಕಾ ಘಟಕವನ್ನು ಖರೀದಿಸಿ ಭಾರತದಲ್ಲಿ ಸ್ಥಾಪಿಸುವ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ ಬರೋಬ್ಬರಿ 250 ದಶಲಕ್ಷ ಡಾಲರ್ – 300 ದಶಲಕ್ಷ ಡಾಲರ್ ಮೌಲ್ಯ ಇರಬಹುದು ಎಂದು ಅಂದಾಜಿಸಲಾಗಿದೆ.
ಮುಂದಿನ ಕೆಲ ವರ್ಷಗಳಲ್ಲಿ ಭಾರತದಲ್ಲಿ 1 ಶತಕೋಟಿ ಡಾಲರ್ ಹೂಡಿಕೆ ಮಾಡಲು ಗ್ರೇಟ್ ವಾಲ್ ಪ್ಲಾನ್ ಮಾಡಿಕೊಂಡಿದೆ. ಆರಂಭದಲ್ಲಿ ಕಾರುಗಳನ್ನು ಮಾರಾಟ ಮಾಡಿ ನಂತರ ಎಲೆಕ್ಟ್ರಿಕ್ ಕಾರು ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಗಡಿ ಘರ್ಷಣೆಯ ನಂತರ ಚೀನಾದ ಆಟೋಮೊಬೈಲ್ಸ್, ಕೆಮಿಕಲ್ಸ್, ಟೆಕ್ಸ್ಟೈಲ್ ಸಹಿತ ಇತರ ಪ್ರಮುಖ ಕೈಗಾರಿಕಾ ಪ್ರಸ್ತಾಪಗಳಿಗೆ ಭಾರತ ತಡೆ ನೀಡಿತ್ತು.