ಗಂಡನಿಂದ ದೂರವಾಗಲೂ ಕೊರೊನಾ ಕಿಡ್ನಾಪ್ ಪ್ಲಾನ್- ಇದು ಬೆಂಗ್ಳೂರು ಟು ದೆಹಲಿ ಕಥೆ

Public TV
2 Min Read

– ಪರಿಚಿತನ ಸಹಾಯದಿಂದ ಮನೆಯಿಂದ ಎಸ್ಕೇಪ್
– ಆಂಬ್ಯುಲೆನ್ಸ್ ನಲ್ಲಿ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್

ಬೆಂಗಳೂರು: ಕೋವಿಡ್ 19 ಆಂಬ್ಯುಲೆನ್ಸ್ ನಿಂದ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಲಾಗಿದೆ ಎಂಬ ಪ್ರರಕಣಕ್ಕೆ ಟ್ವಿಸ್ಟ್ ಲಭಿಸಿದ್ದು, ಪತಿಯಿಂದ ದೂರವಾಗಲೂ ಮಹಿಳೆ ಸ್ವಯಂ ಅಪಹರಣದ ನಾಟಕ ಮಾಡಿದ್ದಳು ಎಂದು ತಿಳಿದುಬಂದಿದೆ. ಸದ್ಯ ಆಕೆ ದೆಹಲಿಯಲ್ಲಿ ಸುರಕ್ಷಿತವಾಗಿದ್ದಾಳೆ ಎಂಬ ಮಾಹಿತಿ ಲಭಿಸಿದೆ.

ಘಟನೆ ಕುರಿತಂತೆ ಪೊಲೀಸರು ಸ್ಪಷ್ಟನೆ ನೀಡಿದ್ದು, ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಗಾಗಿ ಆಂಬ್ಯುಲೆನ್ಸ್ ನಲ್ಲಿ ತೆರಳಿದ್ದ ಯುವತಿ ಕಾಣೆಯಾಗಿದ್ದರು ಎಂದು ಸೆ.11 ರಂದು ಪ್ರತಿಕೆಗಳಲ್ಲಿ ವರದಿ ಪ್ರಕಟವಾಗಿದೆ. ಆದರೆ ಸಾರ್ವಜನಿಕರು ಅನಗತ್ಯವಾಗಿ ಭೀತಿಗೆ ಒಳಗಾಗದೇ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬಹುದು.

ಕುಟುಂಬದ ವೈಯುಕ್ತಿಕ ಸಮಸ್ಯೆಯಿಂದ ಘಟನೆ ನಡೆದಿದೆ. ಕಾಣೆಯಾದ ಮಹಿಳೆ ತಾನು ಸ್ವ-ಇಚ್ಛೆಯಿಂದ ಪರಿಚಿತರ ಸಹಾಯದೊಂದಿಗೆ ತೆರಳಿರುವುದು ಖಚಿತವಾಗಿದೆ. ಇದಕ್ಕೂ ಕೊರೊನಾ ಪರೀಕ್ಷೆ ನಡೆಸುವ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಸಾರ್ವಜನಿಕರು ಆತಂಕ, ಭಯಕ್ಕೊಳಗಾಗದೇ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಬೆಂಗಳೂರು ಪೊಲೀಸರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಏನಿದು ಘಟನೆ: ಸೆ.3 ರಂದು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಮಹಿಳೆ ಸ್ವತಃ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಸೆ.4 ರಂದು ಆಕೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಂಬ್ಯುನೆಲ್ಸ್ ವ್ಯವಸ್ಥೆ ಮಾಡಿ ಮಹಿಳೆಗೆ ಮಾಹಿತಿ ನೀಡಿದ್ದರು. ಆ ಬಳಿಕ ಯುವತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಪತಿ ಮತ್ತು ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ವರದಿಯಾಗಿತ್ತು.

ಆದರೆ ಘಟನೆ ಕುರಿತು ಘಟನೆಯ ಕುರಿತು ವರದಿಯಾದ ಬಳಿಕ ಸ್ಪಷ್ಟನೆ ನೀಡಿದ್ದ ಬಿಬಿಎಂಪಿ, ತಾವು ಆ ವ್ಯಾಪ್ತಿಯಲ್ಲಿ ಯಾವುದೇ ಕೋವಿಡ್ ಪರೀಕ್ಷೆ ನಡೆಸಿಲ್ಲ. ಅಲ್ಲದೇ ಆಂಬ್ಯುಲೆನ್ಸ್ ಕೂಡ ಕಳುಹಿಸಿಕೊಟ್ಟಿಲ್ಲ ಎಂದು ಹೇಳಿತ್ತು. ಯಾವುದೇ ರೋಗಿಯ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸದೆ ಅವರನ್ನು ಆಂಬ್ಯುಲೆನ್ಸ್ ಮೂಲಕ ಕರೆತರುವುದಿಲ್ಲ. ಸಂದೇಶದಲ್ಲಿ ಆಂಬ್ಯುಲೆನ್ಸ್ ಚಾಲಕನ ಮೊಬೈಲ್ ಸಂಖ್ಯೆ, ಗುರುತಿನ ಚೀಟಿ ಮಾಹಿತಿ ಇರುತ್ತದೆ. ಅಲ್ಲದೇ ಎಲ್ಲಾ ಆಂಬ್ಯುಲೆನ್ಸ್ ಗಳಿಗೆ ಜಿಪಿಎಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿತ್ತು.

ಸದ್ಯ ಮಹಿಳೆ ದೆಹಲಿಯ ಪಹರ್ ಗಂಜ್ ಪ್ರದೇಶದಲ್ಲಿ ಇರುವ ಮಾಹಿತಿ ಲಭ್ಯವಾಗಿದ್ದು, ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ್ ಆಗಿರುವ ಆಕೆ ಪತಿಯೊಂದಿಗೆ ವೈಯುಕ್ತಿಕ ವಿವಾದವಿದ್ದ ಕಾರಣ ಮನೆಯನ್ನು ತೊರೆಯಲು ಪ್ಲಾನ್ ಮಾಡಿ ಸ್ನೇಹಿತನ ಸಹಾಯದಿಂದ ತೆರಳಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವ ಆಕೆ ತಾನು ಸುರಕ್ಷಿತವಾಗಿದ್ದು, ಪತಿಯೊಂದಿಗೆ ಇರುವ ಸಮಸ್ಯೆಯನ್ನು ಮಾತನಾಡಿ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದಾಳೆ. ಅಲ್ಲದೇ ಆಕೆಯ ಫೋನ್ ಕರೆಯ ಧ್ವನಿಯನ್ನು ರೆಕಾರ್ಡ್ ಮಾಡಿ ಪೊಲೀಸರು ಆಕೆಯ ಪತಿಗೆ ಕೇಳಿಸಿದ್ದು, ಆ ಧ್ವನಿ ತನ್ನ ಪತ್ನಿಯದ್ದು ಎಂದು ಆತ ದೃಢಪಡಿಸಿದ್ದಾನೆ.

ಇತ್ತ ಸತ್ಯವನ್ನು ಮರೆಮಾಚಿ, ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಕ್ಕಾಗಿ ಕುಟುಂಬದ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವುದಾಗಿ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ವಿಶೇಷ ಅಧಿಕಾರಿ ಪಿ.ಮಣಿವಣ್ಣನ್ ಅವರು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *