ಖಾಸಗೀಕರಣ ವಿರೋಧಿಸಿ ಬಿಇಎಲ್, ಹೆಚ್‍ಎಎಲ್ ನೌಕರರ ಪ್ರತಿಭಟನೆ

Public TV
1 Min Read

ಬೆಂಗಳೂರು: ಖಾಸಗೀಕರಣ ವಿರೋಧಿಸಿ, ಖಾಸಗೀಕರಣ ವಿರೋಧಿ ವೇದಿಕೆ ಬೆಂಗಳೂರಲ್ಲಿ ಪ್ರತಿಭಟನೆ ನಡೆಸುತ್ತಿದೆ. ಅದರ ಭಾಗವಾಗಿ ಜಾಲಹಳ್ಳಿಯ ಬಿಇಎಲ್ ಹಾಗೂ ಹೆಚ್‍ಎಎಲ್ ನೌಕರರು ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.

ದೇಶದ ನಿರ್ಮಾಣಕ್ಕೆ ಹಾಗೂ ಕೃಷಿ ಕೇತ್ರಗಳ ಬೆಳವಣಿಗೆಗೆ ಮೂಲ ಕಾರಣವಾಗಿರುವ ಸಾರ್ವಜನಿಕ ಸಂಸ್ಥೆಗಳ ಉಳಿವಿಗಾಗಿ ಹಾಗೂ ಉದ್ದಿಮೆಗಳ ಖಾಸಗೀಕರಣ ವಿರೋಧಿಸಿ ಇಂದು ಪ್ರತಿಭಟನೆ ನಡೆಸಲಾಗುತ್ತಿದೆ. ಹೆಚ್‍ಎಎಲ್, ಬಿಇಎಂಎಲ್, ಬಿಇಎಲ್, ಬಿಹೆಚ್‍ಇಎಲ್, ವಿಐಎಸ್‍ಎಲ್, ಎಲ್‍ಐಸಿ ಸೇರಿದಂತೆ ಹಲವು ಕಂಪನಿಗಳು ಸಹ ಕೇಂದ್ರದ ಖಾಸಗೀಕರಣ ನೀತಿಗೆ ಆಕ್ರೋಶ ವ್ಯಕ್ತಪಡಿಸಿವೆ.

ಲಾಕ್ ಡೌನ್ ಸಂದರ್ಭದಲ್ಲಿ ಬಿಇಎಲ್, ಬೆಮಲ್, ಹೆಚ್‍ಎಎಲ್ ಜನರ ಪರವಾಗಿ ಕೆಲಸ ಮಾಡಿ ತಮ್ಮ ಸಾಮರ್ಥ್ಯ ತೋರಿವೆ. ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಸಲಕರಣೆ ಸೇರಿದಂತೆ ಜನರಿಗೆ ಬದುಕಲು ಬೇಕಾದ ಎಲ್ಲಾ ಸಹಕಾರವನ್ನು ನೀಡಿವೆ. ಅಷ್ಟೇ ಅಲ್ಲ ಈ ಸಾರ್ವಜನಿಕ ಉದ್ದಿಮೆಗಳು ಕೋಟ್ಯಂತರ ಹಣವನ್ನು ಕೇಂದ್ರಕ್ಕೆ ಸಾಲ ಕೊಡುವಷ್ಟು ಲಾಭ ತಂದರೂ ಕೂಡ ಇವುಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಹೊರಟಿರುವುದು ಎಷ್ಟು ಸರಿ ಎಂದು ಸಂಘಟಕರು ಪ್ರಶ್ನೆ ಮಾಡಿದರು.

ಭಾರತ್ ಎಲೆಕ್ಟ್ರಾನಿಕ್ಸ್ ಯುನಿಯನ್‍ನ ಪ್ರಧಾನ ಕಾರ್ಯದರ್ಶಿ ಆಂಟೋನಿ ಪಿಂಟೋ ಮಾತನಾಡಿ, ಯಾವುದೇ ಕಾರಣಕ್ಕೂ ಖಾಸಗೀಕರಣಕ್ಕೆ ನಾವು ಒಪ್ಪುವುದಿಲ್ಲ ಎಂದರು. ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೌಕರರು ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *