ಖಾಸಗಿ ಆಸ್ಪತ್ರೆಯಲ್ಲಿ ಪೊಲೀಸರಿಗಿಲ್ಲ ಚಿಕಿತ್ಸೆ, ಸಚಿವರ ಎದುರು ಅಳಲು ತೋಡಿಕೊಂಡ ಅಧಿಕಾರಿ

Public TV
1 Min Read

– ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಘಟನೆ

ಶಿವಮೊಗ್ಗ: ಕೊರೊನಾ ವಾರಿಯರ್ಸ್ ಪೊಲೀಸರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಸಚಿವರ ಮುಂದೆ ಅಳಲು ತೋಡಿಕೊಂಡಿರುವ ಘಟನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಜಿಲ್ಲೆಯಾದ್ಯಂತ ಹಾಫ್ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಲಾಕ್‍ಡೌನ್ ಜಾರಿ ಹಿನ್ನೆಲೆಯಲ್ಲಿ ನಗರದ ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು.

ಸಭೆಯಲ್ಲಿ ಭಾಗವಹಿಸಿದ್ದ ದೊಡ್ಡಪೇಟೆ ಠಾಣೆಯ ಇನ್‍ಸ್ಪೆಕ್ಟರ್ ವಸಂತ ಕುಮಾರ್, ತಮಗಾದ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದರು. ಕಳೆದ ಎರಡು ದಿನದ ಹಿಂದೆ ಎಎಸ್ ಐ ಒಬ್ಬರಿಗೆ ಜ್ವರ ಬಂದಿತ್ತು. ಜ್ವರ ಬಂದ ಕಾರಣ ಚಿಕಿತ್ಸೆಗಾಗಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ಸಾಗ ಹಾಕುವ ಪ್ರಯತ್ನವನ್ನೇ ಮಾಡಿದರು. ಸುಮಾರು ಐದಾರು ಆಸ್ಪತ್ರೆಗೆ ಹೋದರೂ ಯಾವ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ದೊರೆಯಲಿಲ್ಲ. ನಂತರ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು ಎಂದರು.

ಕೊರೊನಾ ವಾರಿಯರ್‍ಗಳಾದ ನಮಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಸಕಾಲಕ್ಕೆ ಸರಿಯಾಗಿ ಪೊಲೀಸರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಆಸ್ಪತ್ರೆಯನ್ನು ಗುರುತಿಸುವಂತೆ ಪೊಲೀಸ್ ಅಧಿಕಾರಿ ಸಚಿವ ಈಶ್ವರಪ್ಪ ಬಳಿ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *