ಖಾಸಗಿ ಆಸ್ಪತ್ರೆಗಳಿಂದ ‘ಹೋಂ ಕೇರ್ ಪ್ಯಾಕೇಜ್’ ಪರಿಚಯ

Public TV
2 Min Read

– ದೆಹಲಿಯಲ್ಲಿ ಕುಸಿದ ಸರ್ಕಾರಿ ಆರೋಗ್ಯ ವ್ಯವಸ್ಥೆ
– ಬೆಂಗ್ಳೂರಿನ ಆಸ್ಪತ್ರೆಗಳಲ್ಲೂ ಪ್ಯಾಕೇಜ್?

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. 35 ಸಾವಿರದ ಗಡಿಯಲ್ಲಿರುವ ಸೋಂಕು ದಿನದಿಂದ ದಿನಕ್ಕೆ ಏರುತ್ತಿದ್ದು, ಆರೋಗ್ಯ ಪರಿಸ್ಥಿತಿ ಹದಗೆಡುವಂತೆ ಮಾಡಿದೆ.

ಕೊರೊನಾದಿಂದ ಆರೋಗ್ಯ ವ್ಯವಸ್ಥೆ ಹಳ್ಳ ಹಿಡಿದಿದ್ದು, ಸೋಂಕು ಬೆಳೆಯುತ್ತಿರುವ ವೇಗಕ್ಕೆ ತಕ್ಕಂತೆ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ದೆಹಲಿ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಬೆಡ್‍ಗಳ ಅಭಾವ ಸೃಷ್ಟಿಯಾಗಿದ್ದು, ಕೊರೊನಾ ಗುಣಲಕ್ಷಣಗಳಿರುವ ಸಾವಿರಾರು ಮಂದಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆಗಳು ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಹೀಗಾಗಿ ಸಣ್ಣ ಪ್ರಮಾಣ ಲಕ್ಷಣಗಳಿರುವ ರೋಗಿಗಳ ಮನೆಯಲ್ಲಿ ಚಿಕಿತ್ಸೆ ಪಡೆಯಲು ಸೂಚಿಸಿದ್ದು, ತೀವ್ರವಾಗಿ ಕೊರೊನಾದಿಂದ ಬಳಲುತ್ತಿರುವವರಿಗೆ ಹಾಗೂ ಗಂಭೀರ ಪ್ರಕರಣಗಳಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಎಂದು ದೆಹಲಿ ಸರ್ಕಾರ ಘೋಷಿಸಿದೆ.

ದೆಹಲಿ ಸರ್ಕಾರ ಇಂತದೊಂದು ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ಖಾಸಗಿ ಆಸ್ಪತ್ರೆಗಳು ಹೊಸ ಯೋಜನೆವೊಂದನ್ನು ದೆಹಲಿಯಲ್ಲಿ ಆರಂಭಿಸಿದೆ. ದೆಹಲಿ ಎನ್‍ಸಿಆರ್ ಪ್ರದೇಶದಲ್ಲಿರುವ ಗುರುಗ್ರಾಮ್‍ನ ಮ್ಯಾಕ್ಸ್ ಹೆಲ್ತ್ ಕೇರ್, ಫೋರ್ಟಿಸ್ ಹೆಲ್ತ್ ಕೇರ್ ಹಾಗೂ ಮೆಡಂತ ಹೆಲ್ತ್ ಕೇರ್ ಆಸ್ಪತ್ರೆಗಳು ‘ಹೋಂ ಕೇರ್’ ಹೆಸರಿನ ಹೊಸ ಪ್ಯಾಕೇಜ್‍ವೊಂದನ್ನು ಘೋಷಿಸಿವೆ. ಈ ಪ್ಯಾಕೇಜ್ ಅಡಿ ಸಣ್ಣ ಪ್ರಮಾಣದಲ್ಲಿ ಕೊರೊನಾ ಗುಣಲಕ್ಷಣಗಳು ಇರುವ ರೋಗಿಗಳಿಗೆ ಮನೆಯಲ್ಲೆ ಚಿಕಿತ್ಸೆ ನೀಡಲಿವೆ.

‘ಹೋಂ ಕೇರ್ ಪ್ಯಾಕೇಜ್’ ಹೇಗಿರಲಿದೆ?
* ಮ್ಯಾಕ್ಸ್ ಹೆಲ್ತ್ ಕೇರ್ 15 ದಿನಕ್ಕೆ 7,000 ರೂ. ಮೌಲ್ಯದ ಹೋಂ ಕೇರ್ ಪ್ಯಾಕೇಜ್ ಪ್ರಕಟಿಸಿದೆ.
* ಫೋರ್ಟಿಸ್ ಆಸ್ಪತ್ರೆ 17 ದಿನಕ್ಕೆ 6,000 ರೂ. ಹೋಂ ಕೇರ್ ಪ್ಯಾಕೇಜ್
* ಮೆಡಂತಾ ಹೆಲ್ತ್ ಕೇರ್ ಆಸ್ಪತ್ರೆ 15 ದಿನಕ್ಕೆ 4,900 ರೂ. ಪ್ಯಾಕೇಜ್ ಘೋಷಿಸಿದೆ.
* ಈ ಪ್ಯಾಕೇಜ್ ಡಿಜಿಟಲ್ ಥರ್ಮಾ ಮೀಟರ್, ಆಕ್ಸಿ ಮೀಟರ್, ಡಿಜಿಟಲ್ ಬಿಪಿ ಪರಿಶೀಲನಾ ಯಂತ್ರ ಒಳಗೊಂಡಿರಲಿದೆ.
* ಆರಂಭದಲ್ಲಿ ವೈದ್ಯರು ರೋಗಿಯ ತಪಾಸಣೆ ನಡೆಸಲಿದ್ದಾರೆ.
* ಬಳಿಕ ಪ್ರತಿ ನಿತ್ಯ ಎರಡು ಬಾರಿ ದೂರವಾಣಿ ಮೂಲಕ ನರ್ಸ್ ಆರೋಗ್ಯದ ಮಾಹಿತಿ ಪಡೆದುಕೊಳ್ಳಲಿದ್ದಾರೆ.

* ಆಸ್ಪತ್ರೆ ನೀಡಿದ ವೈದ್ಯಕೀಯ ಸಲಕರಣೆಗಳ ಬಳಸಿಕೊಂಡು ರೋಗಿಯೇ ಪ್ರತಿದಿನದ ವರದಿ ಅಪ್‍ಡೇಟ್ ಮಾಡಬೇಕು.
* ಜ್ವರ, ತಲೆ ನೋವು, ಗಂಟಲು ನೋವು, ದೇಹದ ತಾಪಮಾನ, ಹೃದಯ ಬಡಿತ ಮಾಹಿತಿ ಪ್ರತಿನಿತ್ಯ ಹಂಚಿಕೊಳ್ಳಬೇಕು.
* ಫೋರ್ಟಿಸ್ ಇದಕ್ಕಾಗಿ ಮೊಬೈಲ್ ಆ್ಯಪ್ ತಯಾರು ಮಾಡಿದೆ.
* ಸ್ಕೀಂನ ಒಟ್ಟು ಅವಧಿಯಲ್ಲಿ ಮೂರು ಬಾರಿ ತಜ್ಞ ವೈದ್ಯರು ಆನ್‍ಲೈನ್ ಮೂಲಕ ರೋಗಿಯನ್ನು ಕನ್ಸಲ್ಟ್ ಮಾಡುತ್ತಾರೆ.
* ದೊಡ್ಡ ಪ್ರಮಾಣದ ಬದಲಾವಣೆ ಕಂಡು ಬಂದರೆ ಆಸ್ಪತ್ರೆ ದಾಖಲಾಗಲು ಸಲಹೆ ನೀಡಲಿದ್ದಾರೆ.

ಇವು ಆರಂಭಿಕ ಪ್ಯಾಕೇಜ್‍ಗಳಾಗಿದ್ದು ಕೋವಿಡ್ ಕೇರ್ ಪ್ಯಾಕೇಜ್ ಅಡಿ ಸುಮಾರು 25,000 ರೂ.ವರೆಗಿನ ಪ್ಯಾಕೇಜ್‍ಗಳನ್ನು ಈ ಆಸ್ಪತ್ರೆಗಳು ಪರಿಚಯಿಸಿದೆ. ಇದು ಎನ್- 95 ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಸೇರಿ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಒಳಗೊಂಡಿರಲಿದೆ.

ಇತರೆ ರಾಜ್ಯಕ್ಕೂ ಹೋಂ ಕೇರ್ ಪ್ಯಾಕೇಜ್ ವಿಸ್ತರಣೆ:
ದೆಹಲಿಯಲ್ಲಿ ಆರಂಭಿಕವಾಗಿ ಈ ಪ್ಯಾಕೇಜ್ ವ್ಯವಸ್ಥೆ ಆರಂಭಿಸಿರುವ ಖಾಸಗಿ ಆಸ್ಪತ್ರೆಗಳು ಉತ್ತಮ ಪ್ರತಿಕ್ರಿಯೆ ಬಂದಲ್ಲಿ ದೇಶಾದ್ಯಂತ ಇರುವ ತಮ್ಮ ಇತರೆ ಬ್ರ್ಯಾಂಚ್‍ಗಳಲ್ಲೂ ಪರಿಚಯಿಸುವ ಸಾಧ್ಯತೆ ಇದೆ. ಫೋರ್ಟಿಸ್ ಮತ್ತು ಮ್ಯಾಕ್ಸ್ ಆಸ್ಪತ್ರೆಗಳು ಬೆಂಗಳೂರಿನಲ್ಲಿದ್ದು, ಕೊರೊನಾ ಮೀತಿ ಮೀರಿದರೆ ಸಿಲಿಕಾನ್ ಸಿಟಿಯಲ್ಲೂ ಹೋಂ ಕೇರ್, ಕೋವಿಡ್ ಕೇರ್ ಪ್ಯಾಕೇಜ್ ವ್ಯವಸ್ಥೆ ಶುರುವಾಗುವ ಸಾಧ್ಯತೆಗಳಿದೆ.

Share This Article
Leave a Comment

Leave a Reply

Your email address will not be published. Required fields are marked *