ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ದರ ಪ್ರಸ್ತಾಪ- ಟಾಸ್ಕ್‌ಫೋರ್ಸ್‌ ಶಿಫಾರಸಿಗೆ ಅಪಸ್ವರ

Public TV
3 Min Read

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರಣಕೇಕೆ ಆಗುತ್ತಿರುವ ಸಮಯದಲ್ಲೇ ಕೋವಿಡ್ ಟೆಸ್ಟ್ ಗೆ ಖಾಸಗಿ ಆಸ್ಪತ್ರೆಗಳು ಜನರ ರಕ್ತಹೀರುತ್ತಿವೆ ಎಂದು ಪಬ್ಲಿಕ್ ಟಿವಿ ಮೆಗಾ ಅಭಿಯಾನ ಮಾಡಿ ಜನರ ಮುಂದಿಟ್ಟಿತ್ತು. ಈ ಬೆನ್ನಲ್ಲೇ ಕೋವಿಡ್ ಚಿಕಿತ್ಸೆಗೆ ದರ ನಿಗದಿಗೆ ಟಾಸ್ಕ್ ಫೋರ್ಸಿಗೆ ರಾಜ್ಯ ಸರ್ಕಾರ ಸೂಚಿಸಿತ್ತು. ಇದೀಗ ಟಾಸ್ಕ್ ಫೋರ್ಸ್, ಕೊರೊನಾ ಟೆಸ್ಟ್ ಗೆ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ ಮಾಡಿ ಶಿಫಾರಸು ಮಾಡಿದೆ.

ಸರ್ಕಾರಿ ಹೆಲ್ತ್ ಕಾರ್ಡ್ ಇರುವವರಿಗೆ ಒಂದು ದರ ಹಾಗೂ ಹೆಲ್ತ್ ಕಾರ್ಡ್ ಇಲ್ಲದವರಿಗೆ ಮತ್ತೊಂದು ದರ ಆಗುವ ಸಾಧ್ಯತೆ ದಟ್ಟವಾಗುತ್ತಿದೆ. ಈ ಸಂಬಂಧ, ಕ್ಯಾಬಿನೆಟ್‍ನಲ್ಲಿ ಚರ್ಚೆ ಆಗಿ ಅಂತಿಮ ನಿರ್ಧಾರ ಹೊರಬೀಳಬೇಕಿದೆ. ಹಾಗಾದರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಟೆಸ್ಟ್, ಚಿಕಿತ್ಸೆಗೆ ಒಂದು ದಿನಕ್ಕೆ ಟಾಸ್ಕ್ ಫೋರ್ಸ್ ಶಿಫಾರಸು ಮಾಡಿರುವ ದರದ ಪಟ್ಟಿದೆ ಇಂತಿದೆ.

ಕೊರೊನಾ ಟೆಸ್ಟ್ ಗೆ 2,600 ರೂ., ಕೊರೊನಾ ಚಿಕಿತ್ಸೆಗೆ ಜನರಲ್ ವಾರ್ಡ್ 5,200 ರೂ., ಐಸೋಲೇಷನ್ ವಾರ್ಡ್ 8,500 ರೂ., ಜನರಲ್ ವಾರ್ಡ್ ವಿತ್ ಆಕ್ಸಿಜನ್ 7,500 ರೂ., ಐಸಿಯು ವಿತ್ ವೆಂಟಿಲೇಟರ್ 12,000 ರೂ.ಗಳನ್ನು ದಿನವೊಂದಕ್ಕೆ ನಿಗದಿ ಮಾಡಲಾಗಿದೆ.

ಟಾಸ್ಕ್ ಫೋರ್ಸ್ ಈ ದರವನ್ನು ಏಕಾಏಕಿ ನಿಗದಿ ಮಾಡಿಲ್ಲ. ಮಹಾರಾಷ್ಟ್ರ, ಗುಜರಾತ್, ದೆಹಲಿ, ತೆಲಂಗಾಣದಂತ ರಾಜ್ಯಗಳಲ್ಲಿ ಕೊರೊನಾ ಚಿಕಿತ್ಸೆಗೆ ಎಷ್ಟು ದರ ಇದೆ ಎಂಬುವುದನ್ನು ಪರಿಶೀಲಿಸಿಯೇ ಮಾಡಿದಂತಿದೆ. ಯಾವ ರಾಜ್ಯದಲ್ಲಿ ಎಷ್ಟೆಷ್ಟು ಚಿಕಿತ್ಸಾ ದರ ನಿಗದಿಯಾಗಿದೆ ಎಂಬ ಮಾಹಿತಿ ಇಂತಿದೆ.

ಮಹಾರಾಷ್ಟ್ರದಲ್ಲಿ ಗಂಟಲು ದ್ರವ ಪರೀಕ್ಷೆ 2,200 ರೂ, ಜನರಲ್ ವಾರ್ಡಿಗೆ 4,000 ರೂ., ಐಸೋಲೇಷನ್ ವಾರ್ಡಿಗೆ 7,500 ರೂ., ಐಸಿಯು ವಿತ್ ವೆಂಟಿಲೇಟರ್ 9,000 ರೂ., ನಿಗದಿ ಮಾಡಲಾಗಿದೆ. ತೆಲಂಗಾಣದಲ್ಲಿ ಗಂಟಲು ದ್ರವ ಪರೀಕ್ಷೆಗೆ 2,200 ರೂ., ಜನರಲ್ ವಾರ್ಡಿಗೆ 4,000 ರೂ., ಐಸಿಯು ವಿತ್ ವೆಂಟಿಲೇಟರ್ ಚಿಕಿತ್ಸೆಗೆ 9,000 ಸಾವಿರ ರೂ. ನಿಗದಿ ಮಾಡಲಾಗಿದೆ. ಉಳಿದಂತೆ ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಆಸ್ಪತ್ರೆಯಲ್ಲಿ 2,200, ಮನೆಯಲ್ಲೇ ಆದರೆ 2,800 ರೂ.ಗಳನ್ನು ಗಂಟಲು ದ್ರವ ಪರೀಕ್ಷೆ ನಿಗದಿ ಮಾಡಲಾಗಿದೆ.

ಇತ್ತ ತೆಲಂಗಾಣ, ಮಹಾರಾಷ್ಟ್ರ ನಿಗದಿತ ದರದಲ್ಲಿ ವೈಜ್ಞಾನಿಕವಾಗಿ ಎಲ್ಲಾ ರೋಗಿಗಳಿಗೆ ಕೊರೊನಾ ಚಿಕಿತ್ಸೆ ನೀಡುವುದು ಸಾಧ್ಯವೇ ಇಲ್ಲ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಪ್ರಸನ್ನ ಹೇಳಿದ್ದಾರೆ. ಆಯುಷ್ಮಾನ್ ಭಾರತ್‍ನಂತ ಹೆಲ್ತ್ ಕಾರ್ಡ್ ಇರುವವರಿಗೆ ಈ ದರ ಅನ್ವಯ ಆಗಬಹುದು. ಸರ್ಕಾರದ ಪ್ರಸ್ತಾವಿತ ದರದಲ್ಲಿ ಚಿಕಿತ್ಸೆ ನೀಡುತ್ತೇವೆ ಎಂದಿದ್ದರೆ.

ಹೆಲ್ತ್ ಕಾರ್ಡ್ ಇಲ್ಲದ ರೋಗಿಗಳ ಚಿಕಿತ್ಸೆಗೆ ಸರ್ಕಾರದ ಮುಂದೆ ಎರಡು ದರ ಪಟ್ಟಿ ಕೊಟ್ಟಿದ್ದೇವೆ. ಕೇಂದ್ರದ ನಿರ್ದೇಶನದಂತೆ ಖಾಸಗಿ ಇನ್ಸೂರೆನ್ಸ್‍ನಲ್ಲಿ ಈಗ ಕೊರೊನಾಗೆ ಕವರೇಜ್ ಸಿಗುತ್ತೆ. ಅದರ, ಜವಾಬ್ದಾರಿ ನಾವು ಹೊರುತ್ತೇವೆ. ಈಗಾಗಲೇ ವಿಮೆ ಕಂಪನಿಗಳ ಜೊತೆ ಮಾತಾನಾಡಿದ್ದೇವೆ. ಹೀಗಾಗಿ, ಸರ್ಕಾರ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡೋದು ಬೇಡ. ಏಕಪಕ್ಷೀಯ ನಿರ್ಧಾರ ಮಾಡೋದು ಬೇಡ ಎಂದು ಪ್ರಸನ್ನ ಅವರು ಹೇಳಿದ್ದಾರೆ. ಹೆಲ್ತ್ ಕಾರ್ಡ್ ಇಲ್ಲದವರಿಗೆ ಖಾಸಗಿ ಆಸ್ಪತ್ರೆಗಳು ಹೇಳುವ ಪ್ರಕಾರ ದರ ಎಷ್ಟಿದೆ ಎಂಬ ಮಾಹಿತಿ ಇಂತಿದೆ.

ಹೆಲ್ತ್ ಕಾರ್ಡ್ ಇಲ್ಲದ ಕೊರೊನಾ ರೋಗಿಗಳ ಚಿಕಿತ್ಸೆಗೆ ಜನರಲ್ ವಾರ್ಡಿಗೆ 15,000 ರೂ., ಸ್ಪೆಷಲ್ ವಾರ್ಡಿಗೆ 25,000 ರೂ., ಐಸಿಯು ಬೆಡ್ 35,000 ರೂ., ಐಸಿಯು ವಿತ್ ವೆಂಟಿಲೇಷನ್‍ಗೆ 45,000 ರೂ.ಗಳ ಪ್ರಸ್ತಾಪ ನೀಡಲಾಗಿದೆ.

ಇತ್ತ ಕೊರೊನಾ ಚಿಕಿತ್ಸೆಗೆ ದರ ನಿಗದಿ ಮಾಡುವ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು ಅವರು, ಖಾಸಗಿ ಆಸ್ಪತ್ರೆಗಳ ಅಸೋಷಿಯೇಷನ್ ಜೊತೆ ಮಾತನಾಡಿ ನಿರ್ಧಾರಕ್ಕೆ ಬಂದಿದ್ದೇವೆ. ಬೇರೆ ಬೇರೆ ರಾಜ್ಯಗಳ ಕೊರೊನಾ ಚಿಕಿತ್ಸೆ ವೆಚ್ಚವನ್ನು ನೋಡಿ ನಿರ್ಧರಿಸಲಾಗಿದೆ. ಸಿಎಂ ಬಿಎಸ್‍ವೈ ಅವರೊಂದಿಗೆ ಚರ್ಚೆ ನಡೆಸಿ ಅಂತಿಮವಾಗಿ ವೆಬ್‍ಸೈಟ್‍ನಲ್ಲಿ ಮಾಹಿತಿ ಪ್ರಕಟಿಸುತ್ತೇವೆ ಎಂದರು. ಇನ್ನು ಜೂನ್ 25ಕ್ಕೆ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಅಲ್ಲದೇ, ಕೊರೊನಾ ರೋಗಿಗಳು ಯಾರು ಆತಂಕ ಪಡುವ ಅಗತ್ಯವಿಲ್ಲ. ಹೆಲ್ತ್ ಕಾರ್ಡ್ ಇಲ್ಲದಿದ್ದರೂ ಇದೆ ದರ ಅನ್ವಯಿಸುತ್ತೆ ಎಂಬ ಆಶ್ವಾಸನೆಯನ್ನು ಸಚಿವರು ನೀಡಿದರು. ಈ ನಡುವೆ ಕೊರೊನಾ ಟೆಸ್ಟ್‍ಗೆ ಇಡೀ ದೇಶಾದ್ಯಂತ ಒಂದೇ ದರ ನಿಗದಿ ಮಾಡಿ ಅಂತಾ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

Share This Article
Leave a Comment

Leave a Reply

Your email address will not be published. Required fields are marked *