ಕ್ವಾರಂಟೈನ್ ತಪ್ಪಿಸಿ ಓಡಾಡಿದರೆ ಕ್ರಿಮಿನಲ್ ಕೇಸ್: ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ

Public TV
1 Min Read

ಉಡುಪಿ: ವಿದೇಶ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಉಡುಪಿಗೆ ಬಂದು ಕ್ವಾರಂಟೈನ್‍ನಲ್ಲಿ ಇರುವವರು ಸಾರ್ವಜನಿಕವಾಗಿ ಬಂದು ಸುತ್ತಾಡಿ, ವಸ್ತುಗಳನ್ನು ಖರೀದಿ ಮಾಡಿ ವಾಪಾಸ್ಸಾಗುತ್ತಿದ್ದಾರೆ ಎಂಬ ಆತಂಕಕಾರಿ ದೂರು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದೆ. ಇಂತಹ ದೂರುಗಳು ಸಾರ್ವಜನಿಕರಿಂದ ಮೇಲಿಂದ ಬಂದಿರುವ ಕಾರಣ ಜಿಲ್ಲಾಧಿಕಾರಿ ಜಿ.ಜಗದೀಶ್ ಗರಂ ಆಗಿದ್ದಾರೆ. ಅಲ್ಲದೇ ಕ್ವಾರಂಟೈನ್ ತಪ್ಪಿಸಿ ಓಡಾಡುವವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿಗಳು, ಹೊರದೇಶ, ರಾಜ್ಯಗಳಿಂದ 6,000 ಜನ ಉಡುಪಿಗೆ ಬಂದಿದ್ದಾರೆ. ಎಲ್ಲರನ್ನೂ ಜಿಲ್ಲೆಗೆ ಸ್ವಾಗತ ಮಾಡಿ ಕ್ವಾರಂಟೈನ್ ಮಾಡಿದ್ದೇವೆ. ಕ್ವಾರಂಟೈನ್‍ನಲ್ಲಿರುವವರು ಹೊರಗಡೆ ಓಡಾಡುತ್ತಿದ್ದಾರೆ ಎಂಬ ದೂರು ಸಾರ್ವಜನಿಕರಿಂದ ಬಂದಿದೆ. ಹೋಟೆಲ್, ಹಾಸ್ಟೆಲ್ ಶಾಲೆಗಳಿಂದ ಹೊರಬರುತ್ತಿದ್ದಾರೆ ಎಂಬ ಮಾಹಿತಿ ನಮಗೂ ಇದೆ. ಕ್ವಾರಂಟೈನ್ ನಲ್ಲಿರುವವರು ಓಡಾಡುವುದು ಎಪಿಡೆಮಿಕ್ ಕಾಯ್ದೆಗೆ ವಿರುದ್ಧವಾಗಿದೆ ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.

ಹೊರಗಡೆ ಓಡಾಡುವುದು ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಸೆಕ್ಷನ್ 188 ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ. ಕೊರೊನಾ ವೈರಸ್ ನಂತಹ ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ನಿಮಗೆ ಜಿಲ್ಲಾ ಪ್ರವೇಶಕ್ಕೆ ಕೊಟ್ಟ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ನಿಮ್ಮಿಂದಾಗಿ ಉಡುಪಿಯ ಜನರಿಗೆ ರೋಗ ಹರಡಬಾರದು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *