ಕ್ರಿಕೆಟ್ ಕಾಶಿ ಲಾರ್ಡ್ಸ್​​ನಲ್ಲಿ ಕನ್ನಡಿಗ ರಾಹುಲ್ ಅಬ್ಬರ

Public TV
2 Min Read

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ನಲ್ಲಿ ಭಾರತದ ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್.ರಾಹುಲ್ ಶತಕದಾಟವಾಡಿ ಹಲವು ದಾಖಲೆಗಳ ಒಡೆಯನಾಗಿದ್ದಾರೆ.

ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಬೊಂಬಾಟ್ ಆಗಿ ಬ್ಯಾಟ್ ಬೀಸಿದ ರಾಹುಲ್ 129ರನ್(250 ಎಸೆತ, 12 ಬೌಂಡರಿ, 1 ಸಿಕ್ಸ್) ಸಿಡಿಸುವ ಮೂಲಕ ಶತಕದಾಟವಾಡಿದರು. ಈ ಮೂಲಕ 2018ರ ಬಳಿಕ ವಿದೇಶದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎಂಬ ದಾಖಲೆ ಬರೆದರು. ಈ ಮೊದಲು ಓವೆಲ್ ಮೈದಾನದಲ್ಲಿ ರಾಹುಲ್ ಶತಕ ಬಾರಿಸಿದ್ದರು. ಇದಾದ ನಂತರ ಮೂರು ವರ್ಷಗಳ ಬಳಿಕ ಲಾರ್ಡ್ಸ್ ನಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್‍ನ ಆರನೇ ಶತಕ ಪೂರೈಸಿದರು.

ರಾಹುಲ್ ಲಾರ್ಡ್ಸ್ ನಲ್ಲಿ ಆರಂಭಿಕ ಆಟಗಾರನಾಗಿ 31 ವರ್ಷಗಳ ಬಳಿಕ ಶತಕ ಸಿಡಿಸಿ ಮಿಂಚಿದ್ದರು. ಈ ಹಿಂದೆ ಈಗಿನ ಕೋಚ್ ರವಿಶಾಸ್ತ್ರಿ ಆರಂಭಿಕರಾಗಿ ಶತಕ ಬಾರಿಸಿ ಮಿಂಚಿದ್ದರು. ಇದೀಗ ರಾಹುಲ್ ಶತಕ ಬಾರಿಸುವ ಮೂಲಕ ವಿನೋದ್ ಮಂಕಡ್ ಮತ್ತು ರವಿಶಾಸ್ತ್ರಿ ಬಳಿಕ ಲಾರ್ಡ್ಸ್ ನಲ್ಲಿ ಶತಕಬಾರಿಸಿದ ಆರಂಭಿಕ ಆಟಗಾರ ಎಂಬ ದಾಖಲೆ ಬರೆದರು. ಇದನ್ನೂ ಓದಿ: ಮಾಸ್ಟರ್ ವಿಜಯ್‍ರೊಂದಿಗೆ ಕಾಣಿಸಿಕೊಂಡ ಬ್ಲಾಸ್ಟರ್ ಧೋನಿ

ರಾಹುಲ್ ಲಾರ್ಡ್ಸ್ ಸೆಂಚುರಿಯೊಂದಿಗೆ 2021ರಿಂದ 2023ರ ಅವಧಿಯ ಟೆಸ್ಟ್ ಚಾಂಪಿಯನ್‍ಶಿಪ್ ಪಂದ್ಯಗಳಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ವಿಶೇಷ ದಾಖಲೆ ನಿರ್ಮಿಸಿದರು.

ಬೃಹತ್ ಮೊತ್ತ ಪೇರಿಸಿದ ಭಾರತ
2ನೇ ಟೆಸ್ಟ್‍ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 364ರನ್‍ಗಳ ಬೃಹತ್ ಮೊತ್ತ ಪೇರಿಸಿ ಸದೃಢ ಸ್ಥಿತಿಯಲ್ಲಿದೆ.

ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 364ರನ್‍ಗಳಿಗೆ ಸರ್ವಪತನ ಕಂಡಿದೆ. ಭಾರತದ ಪರ ರೋಹಿತ್ ಶರ್ಮಾ 83ರನ್(145 ಎಸೆತ, 11 ಬೌಂಡರಿ, 1ಸಿಕ್ಸ್), ವಿರಾಟ್ ಕೊಹ್ಲಿ 42ರನ್(103 ಎಸೆತ, 3 ಬೌಂಡರಿ), ರಿಷಬ್ ಪಂತ್ 37ರನ್( 58 ಎಸೆತ, 5 ಬೌಂಡರಿ) ಮತ್ತು ಕೊನೆಯಲ್ಲಿ ಮಿಂಚಿದ ರವೀಂದ್ರ ಜಡೇಜಾ 40ರನ್(120 ಎಸೆತ, 3 ಬೌಂಡರಿ) ನೆರವಿನಿಂದ ಭಾರತ ತಂಡ 126.1 ಓವರ್‍ಗಳಲ್ಲಿ 364ರನ್ ಬಾರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *