ಕ್ಯಾಚ್ ಬಿಟ್ಟು ಬಾಲಿಗೆ ಎಂಜಲು ಹಚ್ಚಿ ಎಡವಟ್ಟು ಮಾಡಿಕೊಂಡ ಉತ್ತಪ್ಪ

Public TV
2 Min Read

ಅಬುಧಾಬಿ: ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರಾಬಿನ್ ಉತ್ತಪ್ಪ ಅವರು ಆಚಾನಕ್ ಆಗಿ ಬಾಲಿಗೆ ಎಂಜಲು ಹಚ್ಚಿ ಐಪಿಎಲ್‍ನಲ್ಲಿ ಮೊದಲ ಬಾರಿಗೆ ಕೊರೊನಾ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

ಕೊರೊನಾ ಕಾರಣದಿಂದ 6 ತಿಂಗಳ ತಡವಾಗಿ ಐಪಿಎಲ್ ಯುಎಇಯಲ್ಲಿ ಆರಂಭವಾಗಿದೆ. ಇಡೀ ವಿಶ್ವದಲ್ಲೇ ಕೊರೊನಾ ಇರುವ ಕಾರಣದಿಂದ ಬಿಸಿಸಿಐ ಕೆಲ ಹೊಸ ಕೊರೊನಾ ನಿಯಮಗಳನ್ನು ರಚಿಸಿಕೊಂಡು ಐಪಿಎಲ್ ಆಡಿಸುತ್ತಿದೆ. ಈ ನಿಯಮಗಳ ಪ್ರಕಾರ ಬಾಲಿಗೆ ಎಂಜಲು ಹಚ್ಚುವುದನ್ನು ನಿಷೇಧ ಮಾಡಿದೆ.

ರಾಬಿನ್ ಉತ್ತಪ್ಪ ಎಡವಟ್ಟು
ಟಾಸ್ ಸೋತ ಕೋಲ್ಕತ್ತಾ ತಂಡ ಮೊದಲು ಬ್ಯಾಟಿಂಗ್ ಬಂದಿತ್ತು. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಜಯದೇವ್ ಉನಾದ್ಕಟ್ ಅವರು ಇನ್ನಿಂಗ್ಸ್‍ನ ಮೂರನೇ ಓವರ್ ಬೌಲ್ ಮಾಡುತ್ತಿದ್ದರು. ಆಗ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್ ಮ್ಯಾನ್ ಸುನಿಲ್ ನರೈನ್ ಅವರು ದೊಡ್ಡ ಹೊಡೆತಕ್ಕೆ ಕೈಹಾಕಿ ಉತ್ತಪ್ಪ ಅವರಿಗೆ ಕ್ಯಾಚ್ ನೀಡಿದರು. ಆದರೆ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ ಉತ್ತಪ್ಪ ಆ ನಂತರ ಬಾಲಿಗೆ ಎಂಜಲು ಹಚ್ಚಿ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ.

ಕೊರೊನಾ ಕಾರಣದಿಂದ ಬಾಲಿಗೆ ಎಂಜಲು ಹಚ್ಚುವುದನ್ನು ಐಪಿಎಲ್ ನಿಷೇಧ ಮಾಡಿದೆ. ಈ ನಿಯಮ ಐಸಿಸಿ ಕೂಡ ಜಾರಿಗೆ ತಂದಿದ್ದು, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲೂ ಬ್ಯಾನ್ ಮಾಡಲಾಗಿದೆ. ಜೊತೆಗೆ ಒಂದು ವೇಳೆ ಬಾಲಿಗೆ ಯಾವುದೇ ಆಟಗಾರ ಎಂಜಲು ಹಚ್ಚಿದರೆ ಎರಡು ಬಾರಿ ಎಚ್ಚರಿಕೆ ನೀಡುತ್ತಾರೆ. ಇದನ್ನೂ ಮೀರಿ ಮೂರನೇ ಬಾರಿ ತಪ್ಪು ಮಾಡಿದರೆ ಎದರುರಾಳಿ ತಂಡಕ್ಕೆ ಬೌಲಿಂಗ್ ಮಾಡುತ್ತಿದ್ದ ತಂಡ ಐದು ರನ್‍ಗಳನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ಐಸಿಸಿ ನಿಯಮ ಮಾಡಿದೆ.

https://twitter.com/ItsRaviMaurya/status/1311308712670195713

ಕೋಲ್ಕತ್ತಾಗೆ ಸುಲಭ ಜಯ
ಬುಧವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಸುಲಭವಾಗಿ ಜಯಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಶುಭ್‍ಮನ್ ಗಿಲ್ ಮತ್ತು ಇಯೋನ್ ಮೋರ್ಗಾನ್ ಅವರ ಉತ್ತಮ ಆಟದಿಂದ ನಿಗದಿತ 20 ಓವರಿನಲ್ಲಿ ಆರು ವಿಕೆಟ್ ಕಳೆದುಕೊಂಡು 175 ರನ್ ಟಾರ್ಗೆಟ್ ನೀಡಿತ್ತು.

ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡ ಶಿವಮ್ ಮಾವಿ ಮತ್ತು ಕಮಲೇಶ್ ನಾಗರ್ಕೋಟಿ ಬೌಲಿಂಗ್‍ಗೆ ತತ್ತರಿಸಿ ಹೋಯ್ತು. ಪವರ್ ಪ್ಲೇ ಹಂತದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡಿತು. ನಾಯಕ ಸ್ಟೀವ್ ಸ್ಮಿತ್ ಮತ್ತು ಉತ್ತಮ ಲಯದಲ್ಲಿದ್ದ ಸಂಜು ಸಮ್ಸನ್ ಬೇಗ ಔಟ್ ಆದರು. ಕೊನೆಯವರೆಗೂ ತಾಳ್ಮೆ ಕಳೆದುಕೊಳ್ಳದೇ ಆಡುವ ಮೂಲಕ ಅರ್ಧ ಶತಕ ಬಾರಿಸಿದ ಟಾಮ್ ಕರ್ರನ್ ಅವರ ಪಂದ್ಯ ಗೆಲ್ಲಿಸುವ ಪ್ರಯತ್ನ ವಿಫಲವಾಗಿದ್ದು, ಈ ಮೂಲಕ 37 ರನ್‍ಗಳ ಅಂತರದಲ್ಲಿ ಕೋಲ್ಕತ್ತಾ ಜಯ ಗಳಿಸಿತು.

Share This Article
Leave a Comment

Leave a Reply

Your email address will not be published. Required fields are marked *