ಕ್ಯಾಂಪಸ್‍ನಲ್ಲಿ ಯುವತಿಯ ಪ್ರಪೋಸ್- ಕಾಲೇಜಿನಿಂದ ವಿದ್ಯಾರ್ಥಿಗಳು ಅಮಾನತು

Public TV
3 Min Read

– ಪ್ರಪೋಸ್ ಒಪ್ಪಿ ಗೆಳತಿಯನ್ನ ತಬ್ಬಿಕೊಂಡ ಯುವಕ

ಇಸ್ಲಾಮಾಬಾದ್: ಕಾಲೇಜು ಆವರಣದಲ್ಲಿ ಪ್ರಪೋಸ್ ಮಾಡಿ ತಬ್ಬಿಕೊಂಡ ಇಬ್ಬರು ವಿದ್ಯಾರ್ಥಿಗಳನ್ನು ಪಾಕಿಸ್ತಾನದ ಲಾಹೋರ್ ವಿಶ್ವವಿದ್ಯಾನಿಲಯವು ಹೊರಹಾಕಿದೆ. ಈ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಲಾಹೋರ್ ವಿಶ್ವವಿದ್ಯಾಲಯದ ವಿಶೇಷ ಶಿಸ್ತು ಸಮಿತಿಯು ಇಬ್ಬರನ್ನು ಶುಕ್ರವಾರ ಸಭೆ ನಡೆಸಲು ಕರೆದಿತ್ತು. ಆದರೆ ಸಭೆಗೆ ಹಾಜರಾಗದ ಯುವಕ ಯುವತಿಯನ್ನು ಕಾಲೇಜಿನಿಂದ ಉಚ್ಛಾಟಿಸಲಾಗಿದೆ.

ಕಾಲೇಜಿನ ಆವರಣದಲ್ಲಿ ಸಾಮಾನ್ಯ ಶಿಸ್ತು, ನೀತಿ, ನಿಯಮ, ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ನೀತಿ ಸಂಹಿತೆಯ ಗಂಭೀರ ಉಲ್ಲಂಘನೆಗಾಗಿ ಇಬ್ಬರು ವಿದ್ಯಾರ್ಥಿಗಳನ್ನು ಹೊರಹಾಕಲು ಸಮಿತಿ ನಿರ್ಧರಿಸಿದೆ. ಅಲ್ಲದೆ ಸೆಕ್ಷನ್ 16ರ ಪ್ರಕಾರ ಲಾಹೋರ್ ವಿಶ್ವವಿದ್ಯಾಲಯ ಮತ್ತು ಅದರ ಎಲ್ಲಾ ಉಪ ಕ್ಯಾಂಪಸ್‍ಗಳಿಗೂ ವಿದ್ಯಾರ್ಥಿಗಳ ಪ್ರವೇಶವನ್ನು ನಿಷೇಧಿಸಿದೆ.

ಕಳೆದ ಗುರುವಾರ ಟ್ವಿಟ್ಟರ್‍ನಲ್ಲಿ ಶೇರ್ ಆದ ಈ ಪ್ರಪೋಸ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟಾಪ್ ಟ್ರೆಂಡ್‍ಗಳ ವೀಡಿಯೋ ಮಧ್ಯೆ ಧೂಳ್ ಎಬ್ಬಿಸುತ್ತಿದ್ದು, ವೀಡಿಯೋದಲ್ಲಿ ಯುವತಿ ಹೂಗುಚ್ಛವನ್ನು ಕೈನಲ್ಲಿ ಹಿಡಿದು ಮಂಡಿಯೂರಿ ತನ್ನ ಗೆಳಯಬಿಗೆ ನೀಡಿ ಪ್ರಪೋಸ್ ಮಾಡುತ್ತಾಳೆ. ಹೂ ಗುಚ್ಛವನ್ನು ಸ್ವೀಕರಿಸಿದ ಯುವಕ ಯುವತಿಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ಈ ವೇಳೆ ಸ್ಥಳದಲ್ಲಿದ್ದ ಇತರೆ ವಿದ್ಯಾರ್ಥಿಗಳು ಜೋಡಿಯನ್ನು ಹುರಿದಂಬಿಸುವುದನ್ನು ಕಾಣಬಹುದಾಗಿದೆ.

ಸದ್ಯ ಈ ಪ್ರೇಮಿಗಳನ್ನು ಕಾಲೇಜಿನಿಂದ ಅಮಾನತುಗೊಳಿಸಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರೊಬ್ಬರು, ದಿ ಗ್ರೇಟ್ ಲೆಜೆಂಡ್ ಅಮಿತಾಬ್ ಬಚ್ಚನ್ ಮೊಹಬ್ಬತೇನ್ ಸಿನಿಮಾದಲ್ಲಿ ಪ್ರೀತಿಗೆ ವಿರೋಧ ವ್ಯಕ್ತಪಡಿಸುವ ಪ್ರಾಂಶುಪಾಲರಾಗಿ ಅಭಿನಯಿಸಿದ್ದರು. ಅದೇ ಮಾದರಿ ಲಾಹೋರ್ ವಿಶ್ವವಿದ್ಯಾನಿಲಯದ ಪ್ರಾಂಶುಪಾಲರು ಕೂಡ ತಮ್ಮನ್ನು ಪ್ರಸ್ತುತ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬಾಲಿವುಡ್‍ನ 3 ಈಡಿಯಟ್ಸ್ ಸಿನಿಮಾದಲ್ಲಿ ಕಟ್ಟು ನಿಟ್ಟಿನ ಪ್ರಿನ್ಸಿಪಾಲ್ ಆಗಿ ಅಭಿನಯಿಸಿದ್ದ ಬೊಮನ್ ಇರಾನಿ ರೀತಿ ವರ್ತಿಸುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ಪಾಕಿಸ್ತಾನದ ಪ್ರಧಾನಮಂತ್ರಿ ಬೆನಜೀರ್ ಭುಟ್ಟೋ ಅವರ ಪುತ್ರಿ ಬಕ್ತಾವರ್ ಭುಟ್ಟೋ-ಜರ್ದಾರಿ ವಿಶ್ವವಿದ್ಯಾಲಯದ ಕ್ರಮ ಕುರಿತಂತೆ ವ್ಯಂಗ್ಯ ಮಾಡಿದ್ದಾರೆ. ಅಲ್ಲದೆ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಂರವರ ಪತ್ನಿ ಶನಿಯೇರಾ ಅಕ್ರಂ, ನಿಮಗೆ ಬೇಕಾದ ನಿಯಮಗಳನ್ನು ಜಾರಿಗೊಳಿಸಿ, ಆದರೆ ನೀವು ಪ್ರೀತಿಯನ್ನು ಹೊರಹಾಕಲು ಸಾಧ್ಯವಿಲ್ಲ. ಪ್ರೀತಿ ನಮ್ಮ ಹೃದಯದೊಳಗಿರುತ್ತದೆ. ಯುವಕರಾಗಿದ್ದ ಬರುವ ಒಂದು ಭಾಗವಾಗಿದ್ದು ಜೀವನದ ಮೌಲ್ಯವನ್ನು ತಿಳಿಸುತ್ತದೆ. ನೀವು ಕಾಲೇಜಿನಲ್ಲಿ ಕಲಿಯದೇ ಇರುವ ವಿಚಾರವನ್ನು ಪ್ರೀತಿ ಕಲಿಸುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.

ಒಟ್ಟಾರೆ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ಕಾಲೇಜಿನ ನಿಯಮದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *